ಮಂಗಳೂರು : ನಗರದ ಉಳಾಯಿಬೆಟ್ಟುವಿನ ಪರಾರಿ ಎಂಬಲ್ಲಿ ನಡೆದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ನಗರದ ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಜಯ್ ಸಿಂಗ್ (21) , ಮುಖೇಶ್ ಸಿಂಗ್(20), ಮುನೀಮ್ ಸಿಂಗ್ (20) ಹಾಗೂ ಜಾರ್ಖಂಡ್ ರಾಜ್ಯದ ರಾಂಚಿ ಜಿಲ್ಲೆಯ ಮುನೀಶ್ ತಿರ್ಕಿ(33) ಬಂಧಿತ ಆರೋಪಿಗಳು.
ಪ್ರಕರಣದ ಹಿನ್ನೆಲೆ : ನಗರದ ಹೊರವಲಯದ ಉಳಾಯಿಬೆಟ್ಟುವಿನ ಪರಾರಿ ಎಂಬಲ್ಲಿನ ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿ ರಾಜ್ಯ ಹಾಗೂ ಹೊರ ರಾಜ್ಯದ ವಲಸೆ ಕಾರ್ಮಿಕರು ದುಡಿಯುತ್ತಿದ್ದರು.
ಇವರಲ್ಲಿ ಎರಡು ಕಾರ್ಮಿಕರ ಕುಟುಂಬದವರಿಗೆ ಫ್ಯಾಕ್ಟರಿ ಮಾಲೀಕರು ಅಲ್ಲಿಯೇ ಶೆಡ್ ನಿರ್ಮಾಣ ಮಾಡಿ ಕೊಟ್ಟಿದ್ದರು. ಅವರಲ್ಲಿ ಮೃತ ಜಾರ್ಖಂಡ್ ಮೂಲದ ಬಾಲಕಿಯ ಕುಟುಂಬವೂ ವಾಸಿಸುತ್ತಿತ್ತು.
ಬಾಲಕಿಯು ತಂದೆ-ತಾಯಿ ಹಾಗೂ ಮೂವರು ಸಹೋದರ, ಸಹೋದರಿಯರೊಂದಿಗೆ ವಾಸಿಸುತ್ತಿದ್ದಳು. ನ.21ರಂದು ಮಧ್ಯಾಹ್ನ 12ರಿಂದ ಈ ಬಾಲಕಿ ಏಕಾಏಕಿ ನಾಪತ್ತೆಯಾಗಿದ್ದಾಳೆ. ಮಧ್ಯಾಹ್ನ 3ರ ಬಳಿಕ ಪೋಷಕರು ಬಾಲಕಿಯನ್ನು ಹುಡುಕಾಟ ನಡೆಸಲು ಆರಂಭಿಸಿದ್ದಾರೆ.
ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದರೂ, ಬಾಲಕಿಯು ಪತ್ತೆಯಾಗಿರಲಿಲ್ಲ. ಆದರೆ, ಸಂಜೆ 6 ಗಂಟೆ ಹೊತ್ತಿಗೆ ಬಾಲಕಿಯ ಮೃತದೇಹ ರಾಜ್ ಟೈಲ್ಸ್ ಫ್ಯಾಕ್ಟರಿಯ ಮೋರಿಯಲ್ಲಿ ಪತ್ತೆಯಾಗಿತ್ತು.
ತಕ್ಷಣ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಸಹಿತ ಮಂಗಳೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದರು.
ಮೃತದೇಹವನ್ನು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಮಹಜರು ಮಾಡಲು ದಾಖಲಿಸಿದ್ದರು. ಅಲ್ಲದೆ, ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿನ 20 ವಲಸೆ ಕಾರ್ಮಿಕರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದರು.
ಹೇಗಿತ್ತು ಪ್ಲ್ಯಾನ್?
ಭಾನುವಾರ ವಲಸೆ ಕಾರ್ಮಿಕರೆಲ್ಲ ದಿನಸಿ ಸಾಮಗ್ರಿ ಖರೀದಿ, ಸಿನಿಮಾ ಎಂದು ಹೊರ ಹೋಗುತ್ತಾರೆ. ಬಾಲಕಿಯ ತಂದೆ-ತಾಯಿ ಮದ್ಯದ ನಶೆಯಲ್ಲಿ ಇರುತ್ತಾರೆ. ಇದನ್ನು ಗಮನಿಸಿರುವ ಆರೋಪಿಗಳು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ಲ್ಯಾನ್ ಮಾಡಿದ್ದಾರೆ.
ನ.21ರಂದು ಮಧ್ಯಾಹ್ನ 1.10ರ ಸುಮಾರಿಗೆ ಬಾಲಕಿ ತನ್ನ ಸಹೋದರ, ಸಹೋದರಿಯರೊಂದಿಗೆ ಫ್ಯಾಕ್ಟರಿ ಆವರಣದಲ್ಲಿ ಆಟವಾಡುತ್ತಿದ್ದರು. ಇದಕ್ಕಾಗಿಯೇ ಕಾಯುತ್ತಿದ್ದ ಆರೋಪಿ ಜಯ ಸಿಂಗ್ ಬಾಲಕಿಯನ್ನು ತಮ್ಮ ಬಾಡಿಗೆ ಮನೆಯೊಳಗೆ ಕರೆದೊಯ್ದಿದ್ದಾನೆ.
ಮುನೀಶ್ ತಿರ್ಕಿ ಎಂಬಾತ ಯಾರಾದರೂ ಬರುತ್ತಾರೆಯೇ ಎಂದು ಹೊರಗಡೆಯಿಂದ ಗಮನಿಸಿದ್ದಾನೆ. ಇದಾದ ನಂತರ ಜಯ ಸಿಂಗ್, ಮುಖೇಶ್ ಸಿಂಗ್, ಮುನೀಮ್ ಸಿಂಗ್ ಒಬ್ಬೊಬ್ಬರಾಗಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.
ಈ ವೇಳೆ ತೀವ್ರ ರಕ್ತಸ್ರಾವದಿಂದ ಬಾಲಕಿ ಬೊಬ್ಬೆ ಹಾಕಲು ಆರಂಭಿಸಿದ್ದಾಳೆ. ಆಗ ಯಾರಿಗಾದರೂ ಗೊತ್ತಾಗುತ್ತದೆಯೇ ಎಂದು ಬೆದರಿದ ಆರೋಪಿಗಳು ಬಾಲಕಿಯನ್ನು ಕತ್ತು ಹಿಸುಕಿ ಕೊಲೆಗೈದಿದ್ದಾರೆ. ಬಳಿಕ ಯಾರೂ ಇಲ್ಲದಿರುವುದನ್ನು ಗಮನಿಸಿ ಬಾಲಕಿಯ ಮೃತದೇಹವನ್ನು ಅಲ್ಲಿಯೇ ಇದ್ದ ಮೋರಿಗೆ ಎಸೆದು ಏನೂ ಅರಿಯದವರಂತೆ ವರ್ತಿಸಲು ಆರಂಭಿಸಿದ್ದಾರೆ.
ಕೃತ್ಯ ಎಸಗಿದ ಬಳಿಕ ಮುಖೇಶ್ ಸಿಂಗ್ ಹಾಗೂ ಮುನೀಶ್ ತಿರ್ಕಿ ಪುತ್ತೂರಿಗೆ ಹೋಗಿದ್ದಾರೆ. ಇಲ್ಲಿಯೇ ಇದ್ದ ಇಬ್ಬರು ಆರೋಪಿಗಳು ಬಾಲಕಿಯ ಹುಡುಕಾಟ ನಡೆಸುವಂತೆ ನಟಿಸಿದ್ದಾರೆ.
ಪೊಲೀಸರು ಅಲ್ಲಿನ ಎಲ್ಲಾ ಕಾರ್ಮಿಕರನ್ನು ಬಂಧಿಸಿ ತನಿಖೆ ನಡೆಸಿದ್ದರು. ತನಿಖೆಯ ವೇಳೆ ಈ ನಾಲ್ವರ ಮೇಲೆ ಅನುಮಾನ ಬಲವಾಗಿ ಹೆಚ್ಚಿನ ತನಿಖೆ ನಡೆಸಿದಾಗ ಆರೋಪಿಗಳು ಕೃತ್ಯ ಎಸಗಿರುವುದನ್ನು ಬಾಯಿ ಬಿಟ್ಟಿದ್ದಾರೆ.
ಈ ಪತ್ತೆ ಕಾರ್ಯದಲ್ಲಿ ಸಹಕರಿಸಿದ್ದ ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಸಿಬ್ಬಂದಿಗೆ ನಗದು ಬಹುಮಾನ ನೀಡಿದ್ದಾರೆ. ನಾಲ್ವರು ಆರೋಪಿಗಳ ಮೇಲೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ.