ಮಂಗಳೂರು: ನವಮಂಗಳೂರು ಬಂದರು ಪ್ರಾಧಿಕಾರ ಹಾಗೂ ಮರ್ಮಗೋವಾ ಪ್ರಾಧಿಕಾರಗಳ ವಿವಿಧ ಯೋಜನೆಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ವರ್ಚುವಲ್ ವೇದಿಕೆಯಲ್ಲಿ ಕೇಂದ್ರ ನೌಕಾಯಾನ ಸಚಿವ ಸರ್ಬಾನಂದ ಸೋನೊವಾಲ್ ಅವರು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ದೇಶದೊಳಗಿನ ಎಲ್ಲಾ ಬಂದರುಗಳ ಸಾಮರ್ಥ್ಯ ಸುಧಾರಣೆಗಾಗಿ ಸಾಗರಮಾಲಾದಡಿ 802 ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಅವುಗಳನ್ನು ಹಂತ ಹಂತವಾಗಿ ಪೂರ್ಣ ಗೊಳಿಸಲಾಗುತ್ತಿದೆ. ದೇಶದ ಅಭಿವೃದ್ಧಿಯಲ್ಲಿ ಬಂದರುಗಳ ಕೊಡುಗೆಯನ್ನು ಗಮನದಲ್ಲಿರಿಸಿಕೊಂಡು ಪ್ರಧಾನಿ ಮೋದಿಯವರು ಹಾಕಿಕೊಂಡ ಸಾಗರಮಾಲಾ ಇವೆಲ್ಲವು ನಡೆಯುತ್ತಿದ್ದು, ಈಗಾಗಲೇ ಸಾಗರಮಾಲಾದಡಿಯಲ್ಲಿ 200 ಕ್ಕೂ ಅಧಿಕ ಯೋಜನೆಗಳು ಪೂರ್ಣಗೊಂಡಿವೆ. ಬಂದರುಗಳ ಆಧುನೀಕರಣ ನಡೆಯುತ್ತಿದ್ದು, ಬಂದರುಮುಖಿ ಕೈಗಾರಿಕೀಕರಣ, ಬಂದರುಮುಖಿ ಸಂಪರ್ಕ ವ್ಯವಸ್ಥೆ , ಕರಾವಳಿ ಸಮುದಾಯ ಅಭಿವೃದ್ಧಿ , ಕರಾವಳಿ ನೌಕಾಯಾನ ಮತ್ತು ಜಲ ಮಾರ್ಗಗಳ ಅಭಿವೃದ್ದಿ ಹಂತಹಂತವಾಗಿ ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀಪಾದ ನಾಯಕ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ರಾಜ್ಯ ಸಭಾ ಸದಸ್ಯ ವಿಜಯ್ ತೆಂಡುಲ್ಕರ್ ಮತ್ತಿತರರಿದ್ದರು. ಎನ್‌ಎಂಪಿಎ ಪ್ರಾಧಿಕಾರದ ಚೇರ್ಮನ್ ಡಾ.ಎ.ವಿ.ರಮಣ ಸ್ವಾಗತಿಸಿದರು. ರಸ್ತೆ ಸುಧಾರಣೆ, ಟ್ರಕ್ ಟರ್ಮಿನಲ್ ಬಂದರು ಪ್ರಾಧಿಕಾರದ ಮುಖ್ಯ ಗೇಟ್ ನಿಂದ ಕುದುರೆಮುಖ ಜಂಕ್ಷನ್ವರೆಗೆ 700 ಮೀಟರ್ ಉದ್ದದ ಸರ್ವಿಸ್ ರಸ್ತೆಯನ್ನು ಅಗಲಗೊಳಿಸಿ, ಕಾಂಕ್ರೀಟ್ ಹಾಕುವ 3.75 ಕೋಟಿ ರೂ. ಕಾಮಗಾರಿಗೆ ಶಿಲಾನ್ಯಾಸವನ್ನು ಇದೇ ವೇಳೆ ನೆರವೇರಿಸಲಾಯಿತು. ಕಸ್ಟಂಸ್ ಹೌಸ್ ಸಮೀಪ ಈಗಿರುವ ಟ್ರಕ್ ಟರ್ಮಿನಲ್ ಅನ್ನು 3.71 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಕಾಮಗಾರಿಕೆಗೆ ಕೂಡ ಶಿಲಾನ್ಯಾಸ ನೆರವೇರಿತು.
ಇದನ್ನೂ ಓದಿ: ಧಾರವಾಡ: ಐಐಐಟಿ ಲೋಕಾರ್ಪಣೆಗೊಳಿಸಿದ ದೇಶದ ಮೊದಲ ಪ್ರಜೆ ದ್ರೌಪದಿ ಮುರ್ಮು