ಬಂಟ್ವಾಳ(ದಕ್ಷಿಣ ಕನ್ನಡ) : ಬಿ ಸಿ ರೋಡಿನ 'ಗೂಡಿನಬಳಿ'ಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಹೊಸ ಹುರುಪು ಬಂದಿದೆ. ಇಲ್ಲಿನ ದ್ವಿತೀಯ ಪಿಯುಸಿ ನಿರ್ಗಮಿತ ವಿದ್ಯಾರ್ಥಿಗಳು, ಬಣ್ಣ ಕಳೆದುಕೊಂಡಿದ್ದ ಕಾಲೇಜಿನ ಕಟ್ಟಡಕ್ಕೆ ಬಣ್ಣ ಹಚ್ಚಿ ಹೊಸ ಹೊಳಪು ನೀಡಿದ್ದಾರೆ.
ಸೂರ್ಯ, ರಕ್ಷಿತ್, ಚಿತ್ರೇಶ್, ಧೀರಜ್, ಸಂಪತ್, ಲವೇಶ್ ಹಾಗೂ ಭುವನೇಶ್ ಬಂಗೇರ ಎಂಬ ಏಳು ವಿದ್ಯಾರ್ಥಿಗಳು ಕಾಲೇಜು ಕಟ್ಟಡಕ್ಕೆ ಪೇಂಟಿಂಗ್ ಮಾಡಿ ಕಾಲೇಜಿನ ಸೌಂದರ್ಯ ವೃದ್ಧಿಸಿದ್ದಾರೆ. ಸೂರ್ಯ, ರಕ್ಷಿತ್ ಹಾಗೂ ಚಿತ್ರೇಶ್ ಈ ಹಿಂದೆಯೂ ಬಿಡುವಿನ ವೇಳೆಯಲ್ಲಿ ಪೇಂಟಿಂಗ್ ಕೆಲಸಕ್ಕೆ ಹೋಗಿ ಪೇಂಟಿಂಗ್ ಕೌಶಲ್ಯ ಬೆಳೆಸಿಕೊಂಡಿದ್ದರು. ಶಾಲೆಯ ಎನ್ಎಸ್ಎಸ್ ಘಟಕದಲ್ಲಿ ಸಕ್ರಿಯರಾಗಿದ್ದುಕೊಂಡು ಶ್ರಮದಾನ ಸೇವೆಯ ಅನುಭವವೂ ಇವರಿಗಿದೆ. ಕಾಲೇಜಿಗೆ ಸುಣ್ಣ-ಬಣ್ಣ ಬಳಿಯುವ ಕುರಿತು ಪ್ರಿನ್ಸಿಪಾಲ್ ಯೂಸೂಫ್ ಅವರಲ್ಲಿ ವಿದ್ಯಾರ್ಥಿಗಳು ಭಿನ್ನವಿಸಿದಾಗ ಪ್ರಿನ್ಸಿಪಾಲ್ ಅದಕ್ಕೆ ಪ್ರೋತ್ಸಾಹ ನೀಡಿದ್ದಾರೆ.
ದ್ವಿತೀಯ ಪಿಯಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳು ನೀಡಿದ್ದ ಏಳೂವರೆ ಸಾವಿರ ರೂಪಾಯಿ ಮೊತ್ತಕ್ಕೆ, ಪ್ರಿನ್ಸಿಪಾಲ್ ಮತ್ತು ಇತರ ಉಪನ್ಯಾಸಕರು ಕೊಡುಗೆ ನೀಡಿದ ಮೊತ್ತವನ್ನು ಸೇರಿಸಿ ಅಂದಾಜು ₹25 ಸಾವಿರ ಮೊತ್ತ ಸಂಗ್ರಹಿಸಿದ್ದಾರೆ. ಅದೇ ಮೊತ್ತದಿಂದ ಬಣ್ಣ, ಬ್ರಶ್ ಮೊದಲಾದ ಅಗತ್ಯ ವಸ್ತುಗಳನ್ನು ಖರೀದಿಸಲಾಯಿತು. ಸುಮಾರು 15 ಸಾವಿರ ರೂಪಾಯಿ ಅಂದಾಜು ಮೊತ್ತದ ಮೂರು ದಿನಗಳ ಶ್ರಮಸೇವೆಯನ್ನು ವಿದ್ಯಾರ್ಥಿಗಳು ನೀಡಿದ್ದಾರೆ. ಕಾಲೇಜಿನ ಎನ್ಎಸ್ಎಸ್ ಘಟಕದ ಸಂಯೋಜಕ ಬಾಲಕೃಷ್ಣ ನಾಯ್ಕ್ ಮಾರ್ಗದರ್ಶನದಲ್ಲಿ, ಉಪನ್ಯಾಸಕರಾದ ದಾಮೋದರ ಹಾಗೂ ಅಬ್ದುಲ್ ರಝಾಕ್ ಅನಂತಾಡಿ ಸಹಕಾರದೊಂದಿಗೆ ವಿದ್ಯಾರ್ಥಿಗಳು ಕಾಲೇಜಿನ ಅಂದ ಹೆಚ್ಚಿಸಿದ್ದಾರೆ.