ಸುಬ್ರಮಣ್ಯ(ದಕ್ಷಿಣ ಕನ್ನಡ) : ಮಾಜಿ ಪ್ರಧಾನಿ, ರಾಜ್ಯಸಭೆ ಸದಸ್ಯರಾಗಿರುವ ಹೆಚ್ ಡಿ ದೇವೇಗೌಡ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇಂದು ಭೇಟಿ ನೀಡಿ ತುಲಾಭಾರ ಸೇವೆಯನ್ನು ನೆರವೇರಿಸಿ, ದೇವರ ದರ್ಶನ ಪಡೆದರು.
ಪತ್ನಿ ಚೆನ್ನಮ್ಮ ಅವರೊಂದಿಗೆ ಆಗಮಿಸಿದ ದೇವೇಗೌಡರನ್ನು ದೇಗುಲದ ವತಿಯಿಂದ ಸ್ವಾಗತಿಸಲಾಯಿತು. ಬಳಿಕ ದೇಗುಲದ ಗೋಪುರ ಬಳಿ ಸಸಿ ನೆಟ್ಟ ದಂಪತಿ, ಅಕ್ಕಿ, ಕಾಯಿ, ಬೆಲ್ಲದಿಂದ ತುಲಾಭಾರ ನೆರವೇರಿಸಿದರು.
ಇದಾದ ನಂತರ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಭೇಟಿ ನೀಡಿದ ದೇವೇಗೌಡ ದಂಪತಿ, ಸ್ವಾಮೀಜಿಗಳ ಆಶೀರ್ವಾದ ಪಡೆದರು. ತದನಂತರ ದೇವರ ದರ್ಶನ ಪಡೆದರು. ಮಧ್ಯಾಹ್ನದ ಮಹಾಪೂಜೆಯಲ್ಲಿ ಪಾಲ್ಗೊಂಡ ದೇವೇಗೌಡ ದಂಪತಿಗೆ ಪ್ರಧಾನ ಅರ್ಚಕರು ಪ್ರಸಾದ ವಿತರಿಸಿದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ದೇವೇಗೌಡರು,ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಸಮಯದಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದೆ. ಆಮೇಲೆ ಬಂದಿರಲಿಲ್ಲ. ಇವತ್ತು ಶನಿವಾರ ವಿಶೇಷ ದಿವಸವಾದ ಹಿನ್ನೆಲೆ ದೇವಸೇನಾಪತಿಯಾದ ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ಇತ್ತೀಚೆಗೆ ಕೋವಿಡ್ ಪಾಸಿಟಿವ್ ಕಂಡುಬಂದ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಬೇಕೆಂದು ಅಂದುಕೊಂಡಿದ್ದೆ ಎಂದರು.
ಓದಿ: ಕೇವಲ 6 ಅಡಿ ಅಗಲದಲ್ಲಿ 5 ಅಂತಸ್ತಿನ ಮನೆ ನಿರ್ಮಾಣ: ಇಲ್ಲಿದೆ ದೇಶದ ಅತ್ಯಪರೂಪದ ಮನೆ