ಮಂಗಳೂರು: ಸೋಮವಾರ ನಡೆದಿದ್ದ ಸಿಎಎ ಪರ ರ್ಯಾಲಿಯಲ್ಲಿ ನನ್ನ ತಲೆ ಕಡಿಯುತ್ತೇವೆ ಎಂದು ಘೋಷಣೆ ಕೂಗಿದ ಯುವಕರಿಗೆ ಸಿಎಎ, ಎನ್ಆರ್ಸಿ ಬಗ್ಗೆ ನಿಜಾಂಶ ಗೊತ್ತಾದರೆ ನನ್ನ ವಿರುದ್ಧ ಅಲ್ಲ, ಅವರ ವಿರುದ್ಧವೇ ಘೋಷಣೆ ಕೂಗಬಹುದು ಎಂದು ಮಾಜಿ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವು ಯುವಕರಿಗೆ ಸರಿಯಾಗಿ ವಿಷಯ ಗೊತ್ತಿಲ್ಲದೆ ಘೋಷಣೆ ಕೂಗಿದ್ದಾರೆ. ಅವರಿಗೆ ಸರಿಯಾಗಿ ವಿಷಯ ಗೊತ್ತಾಗಿ ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿ ಬಂದಾಗ ಎನ್ಆರ್ಸಿ ಕಾನೂನು ತಂದವರ ವಿರುದ್ಧ ಘೋಷಣೆ ಕೂಗಬಹುದು ಎಂದರು. ಎನ್ಆರ್ಸಿ ಕಾನೂನು ಬಂದಾಗ ಇವರು ಮೈದಾನಕ್ಕೆ ಹೋಗಿದ್ದಾರೆ, ರಕ್ಷಣಾ ಸಚಿವರ ಭಾಷಣ ಕೇಳಿದ್ದಾರೆ. ಇವರನ್ನು ಸಹ ಎನ್ಆರ್ಸಿ ಯಲ್ಲಿ ಕೇಂದ್ರ ಸರ್ಕಾರ ಬಿಡುವುದಿಲ್ಲ ಎಂದರು.
ಇನ್ನು, ಈ ಬೆದರಿಕೆ ಘೋಷಣೆ ಬಗ್ಗೆ ದೂರು ದಾಖಲಿಸುವುದಿಲ್ಲ. ಅವರನ್ನು ಜೈಲಿಗೆ ಕಳುಹಿಸಬಹುದು. ಆದರೆ ಅವರ ತಂದೆ ತಾಯಿಗಳು ಇವರನ್ನು ಜೈಲಿನಿಂದ ಬಿಡಿಸಲು, ಜಾಮೀನು ನೀಡಲು ಕಷ್ಟ ಪಡಬೇಕಾಗುತ್ತದೆ. ಅದಕ್ಕಾಗಿ ನಾನು ದೂರು ನೀಡುವುದಿಲ್ಲ. ಆದರೆ ಕೆಲವು ಬೆಂಬಲಿಗರು ದೂರು ನೀಡುತ್ತಿದ್ದಾರೆ ಎಂದರು. ನನ್ಮ ತಲೆ ತೆಗೆದು ಬಳಿಕ ಕೈಕಾಲು ತೆಗೆಯುತ್ತೇನೆ ಅನ್ನುತ್ತಾರೆ. ಆದ್ರೆ ತಲೆ ತೆಗೆದ ಬಳಿಕ ಕೈಕಾಲು ತೆಗೆದು ಏನು ಪ್ರಯೋಜನ ಎಂದು ಯು ಟಿ ಖಾದರ್ ನಗೆಚಟಾಕಿ ಹಾರಿಸಿದ್ರು.
ಈ ಬೆದರಿಕೆ ಘೋಷಣೆ ನಮ್ಮ ಜಿಲ್ಲೆಯವರು ಮಾಡಿದ್ದಲ್ಲ. ಹೊರ ಜಿಲ್ಲೆಯವರು ಮಾಡಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು.