ಮಂಗಳೂರು : ವಿಧಾನ ಪರಿಷತ್ ಸದಸ್ಯ ಸಿ. ಎಂ. ಇಬ್ರಾಹಿಂ ಅವರು ಜೆಡಿಎಸ್ ಗೆ ಹೋಗಲು ಸಾಧ್ಯವೇ ಇಲ್ಲವೆಂದು ಮಾಜಿ ಸಚಿವ ಯು ಟಿ ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿ ಎಂ ಇಬ್ರಾಹಿಂ ಅವರು ನಮ್ಮ ಹಿರಿಯ ನಾಯಕರು. ಅಪೇಕ್ಷೆಗಳು ಈಡೇರದೇ ಇದ್ದಾಗ ನೋವಾಗುವುದು ಸ್ವಾಭಾವಿಕ. ಅವರು ಕಾಂಗ್ರೆಸ್ ಪಕ್ಷದಲ್ಲೇ ಇರುತ್ತಾರೆ. ಅವರು ಎಂದಿಗೂ ಜೆಡಿಎಸ್ಗೆ ಹೋಗಲು ಸಾಧ್ಯವೇ ಇಲ್ಲ. ಜೆಡಿಎಸ್ ಅನ್ನು ಅವರು ಕಠಿಣ ಶಬ್ದಗಳಲ್ಲಿ ಟೀಕಿಸಿದ್ದರು. ಜೆಡಿಎಸ್ ಕೂಡ ಅವರನ್ನು ಅವಮಾನ ಮಾಡಿತ್ತು ಎಂದರು.
ಮುಂದೆ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ. ಈ ಬಗ್ಗೆ ಜನ ಈಗಾಗಲೇ ತೀರ್ಮಾನ ಮಾಡಿದ್ದಾರೆ. ನಾಳೆ ಚುನಾವಣೆ ನಡೆದರೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಜನ ತೀರ್ಮಾನ ಮಾಡಿದ್ದಾರೆ. ಬಿಜೆಪಿಯು ಜನರಿಂದ ತಿರಸ್ಕೃತಗೊಂಡ ಪಕ್ಷ. ಸಾಧಾರಣವಾಗಿ ಜನರಿಗೆ 5 ವರ್ಷವಾದಾಗ ಆಡಳಿತ ಪಕ್ಷದ ವಿರುದ್ಧ ಅಸಮಾಧಾನ ಇರುತ್ತದೆ. ಆದರೆ ಇಲ್ಲಿ ನಾಲ್ಕೇ ವರ್ಷದಲ್ಲಿ ಜನರಿಗೆ ಸಾಕಾಗಿದೆ ಎಂದು ಹೇಳಿದರು.
ಮಂಗಳೂರು ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಲಿ :
ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರನ್ನು ನಾಮಕರಣ ಮಾಡಲಿ ಎಂದು ಖಾದರ್ ಆಗ್ರಹಿಸಿದರು. ನಾರಾಯಣ ಗುರುಗಳು ಮೊದಲ ಬಾರಿಗೆ ಮಂಗಳೂರಿಗೆ ಬಂದಿಳಿದ ಸ್ಥಳ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ. ಈ ರೈಲು ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡುವಂತೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಮಂಗಳೂರು ಮಹಾನಗರ ಪಾಲಿಕೆಯಿಂದ ಈ ಬಗ್ಗೆ ಪ್ರಕ್ರಿಯೆ ನಡೆಯಬೇಕು. ಅವರು ಯಾವ ಚುನಾವಣೆಗೆ ಕಾಯುತ್ತಿದ್ದಾರೆ ಅನ್ನೋದು ಗೊತ್ತಿಲ್ಲ ಎಂದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ