ಮಂಗಳೂರು : ಕೇಂದ್ರ ಸರ್ಕಾರವು ಗ್ಯಾಸ್, ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ಹಗಲು ದರೋಡೆ ಮಾಡುತ್ತಿದೆ. ಕೇಂದ್ರದಲ್ಲಿ ಕರುಣೆಯಿಲ್ಲದ, ಕನಿಕರವಿಲ್ಲದ ಸರ್ಕಾರ ಅಧಿಕಾರದಲ್ಲಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಸಣ್ಣ ದರ ಏರಿಕೆಯಾದರೂ ಪ್ರತಿಭಟನೆ ನಡೆಸುತ್ತಿದ್ದರು. ಅಂತಾರಾಷ್ಟ್ರೀಯ ಕಚ್ಚಾತೈಲದ ದರ ಏರಿಕೆಯಾಗಿದ್ದರೂ ಗ್ಯಾಸ್, ಪೆಟ್ರೋಲ್, ಡೀಸೆಲ್ ದರವನ್ನು ಯುಪಿಎ ಸರ್ಕಾರ ನಿಯಂತ್ರಣದಲ್ಲಿರಿಸಿತ್ತು.
ನರೇಂದ್ರ ಮೋದಿ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿತ್ತು. ಆದರೆ, ಇದೀಗ ದರ ಏರಿಕೆ ನಿಯಂತ್ರಿಸದೆ ಕಳೆದ ಏಳು ವರ್ಷಗಳಿಂದ ಅಧಿಕಾರದಲ್ಲಿದ್ದರೂ ಹಿಂದಿನ ಸರ್ಕಾರವನ್ನು ದೂರುವ ಕೆಲಸ ಮಾಡುತ್ತಿದೆ. ಈ ಬೆಲೆ ಏರಿಕೆ ಬಗ್ಗೆ ಧ್ವನಿಯೆತ್ತಿದರೆ ಅವರನ್ನು ದೇಶದ್ರೋಹಿಗಳೆಂದು ಬಾಯಿಮುಚ್ಚಿಸುತ್ತಾರೆ ಎಂದು ಆಪಾದಿಸಿದರು.
ಬಿಜೆಪಿಯವರು ವಂಚನೆ ಮಾಡಿ ಬುದ್ಧಿವಂತರಾಗಿದ್ದಾರೆ. ಜನರು ದಡ್ಡರಾಗಿದ್ದಾರೆ. ಬಿಜೆಪಿ ಸರ್ಕಾರದ ಅಧಿಕಾರವಧಿಯಲ್ಲಿ ಕೃಷಿಕರು, ಕೂಲಿಕಾರರು, ಮೀನುಗಾರರು, ಯುವಜನತೆ ಸಂಕಷ್ಟಕ್ಕೊಳಗಾಗಿದ್ದಾರೆ. ಜನರಲ್ಲಿ ಭಾವನಾತ್ಮಕ ವಿಚಾರ ಬಿತ್ತಿ ಮೂರ್ಖರನ್ನಾಗಿ ಮಾಡಲಾಗುತ್ತಿದೆ ಎಂದು ಆಪಾದಿಸಿದರು.