ಬಂಟ್ವಾಳ: ಖಾಸಗಿ ಏಜೆನ್ಸಿಗಳು ವಿಧಿಸಿದ ದುಬಾರಿ ದರ ನೀಡಿ ರಿಫ್ಲೆಕ್ಟರ್ ಸ್ಟಿಕ್ಕರ್ ಹಾಕಿದರಷ್ಟೇ ಆರ್ಟಿಓ ಕಚೇರಿ ಫಿಟ್ನೆಸ್ ಸರ್ಟಿಫಿಕೇಟ್ ಕೊಡುವ ಕ್ರಮದ ವಿರುದ್ಧ ಮಾಜಿ ಸಚಿವ ಬಿ.ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಲ್ಕಾರ್‌ನಲ್ಲಿರುವ ಆರ್‌ಟಿಒ ಕಚೇರಿಗೆ ದಿಢೀರ್ ಭೇಟಿ ನೀಡಿದ ಅವರು ಅಧಿಕಾರಿಗಳ ಬಳಿ ರಾಜ್ಯ ಸರಕಾರದ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಸರಕಾರವು ರಿಫ್ಲೆಕ್ಟರ್ ಸ್ಟಿಕ್ಕರ್ ಬೆಲೆಯನ್ನು ಸಾವಿರಾರು ರೂಗಳಿಗೆ ಏರಿಕೆ ಮಾಡಿದೆ. ಜೊತೆಗೆ ನಿಗದಿತ ಏಜೆನ್ಸಿಯವರಿಂದಲೇ ಈ ರಿಫ್ಲೆಕ್ಟರ್ ಹಾಕಿಸಿಕೊಳ್ಳಬೇಕು ಎಂಬ ಆದೇಶ ಮಾಡಿದ್ದು, ಈ ಮೂಲಕ ಬಡ ವಾಹನ ಚಾಲಕರ ಹೊಟ್ಟೆಗೆ ಹೊಡೆದು ಹಗಲು ದರೋಡೆ ಮಾಡುತ್ತಿದೆ ಎಂದು ಆರೋಪಿಸಿದರು. ಇದನ್ನು ನಿಲ್ಲಿಸದೇ ಇದ್ದಲ್ಲಿ ಆರ್ಟಿಓ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಈ ಸಂದರ್ಭದಲ್ಲಿ ಎಚ್ಚರಿಸಿದರು.
ಖಾಸಗಿ ಎಜೆನ್ಸಿಯಿಂದ ಸುಲಿಗೆ: ಈ ಸ್ಟಿಕ್ಕರ್ ಹಾಕಿದ ಬಳಿಕ ಏಜೆನ್ಸಿಯವರೇ ಬಿಲ್ಲು ನೀಡುತ್ತಿದ್ದು, ಇಲಾಖೆಗೂ ಅದಕ್ಕೂ ಸಂಬಂಧವೇ ಇಲ್ಲ. ಇದರಿಂದ ಏಜೆನ್ಸಿ ಲಾಭ ಪಡೆದು ಅದರ ಅಂಶವನ್ನು ಯಾರಿಗೋ ನೀಡುತ್ತಿದೆ ಎಂದು ಹೇಳಿದರು. ಈಗಾಗಲೇ ಬೆಲೆ ಏರಿಕೆಯಿಂದ ಬಡ ಜನರು ಬೇಸತ್ತಿದ್ದು, ಹೀಗಾಗಿ ಈ ರೀತಿ ಸುಲಿಗೆಯನ್ನು ನಿಲ್ಲಿಸಬೇಕು ಎಂದು ಹೇಳಿದರು.
ಫಿಟ್‌ನೆಸ್ ಟೆಸ್ಟ್ ಮಾಡಲು ಬಂದ ಟೂರಿಸ್ಟ್ ವಾಹನಗಳಿಗೆ ಸಾರಿಗೆ ಪ್ರಾಧಿಕಾರ ದರ ನಿಗದಿಪಡಿಸುವ ಮೊದಲೇ ಖಾಸಗಿ ಸಂಸ್ಥೆಯವರು ವಾಹನ ಚಾಲಕರಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಈ ಖಾಸಗಿ ಕಂಪನಿಗಳಿಂದ ಸ್ಟಿಕ್ಕರ್ ಹಾಕಿಸಿದ ಬಳಿಕ ಅವರು ನೀಡಿದ ಸರ್ಟಿಫಿಕೇಟ್ ಇದ್ದಲ್ಲಿ ಮಾತ್ರ ಸಾರಿಗೆ ಇಲಾಖೆ ಫಿಟ್ ನೆಸ್ ಸರ್ಟಿಫಿಕೇಟ್ ನೀಡುತ್ತಿವೆ. ನಾಲ್ಕು ಚಕ್ರಗಳ ವಾಣಿಜ್ಯ ವಾಹನಕ್ಕೆ ಸಾವಿರಕ್ಕೂ ಅಧಿಕವಾದರೆ, 6 ಚಕ್ರಗಳ ಲಾರಿಗೆ 4 ಸಾವಿರಕ್ಕೂ ಅಧಿಕ ದರವನ್ನು ಈ ಖಾಸಗಿ ಕಂಪೆನಿಗಳು ವಿಧಿಸುತ್ತಿವೆ ಎಂದು ಸಂತ್ರಸ್ತರು ದೂರಿದ್ದಾರೆ.
ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಅಬ್ಬಾಸ್ ಅಲಿ, ಪದ್ಮನಾಭ ರೈ, ಸುಭಾಶ್ಚಂದ್ರ ಶೆಟ್ಟಿ, ಲೋಕೇಶ ಸುವರ್ಣ ಅಲೆತ್ತೂರು, ಮೋಹನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: 90 ಮೀ ಎತ್ತರದ ಅಗ್ನಿಶಾಮಕ ಏರಿಯಲ್ ಲ್ಯಾಡರ್ ಲೋಕಾರ್ಪಣೆಗೊಳಿಸಿದ ಸಿಎಂ