ಬೆಳ್ತಂಗಡಿ(ದಕ್ಷಿಣ ಕನ್ನಡ): ಕೊಲೆಗೀಡಾದ ದಿನೇಶ್ ಹಾಗೂ ನರಗುಂದದ ಮುಸ್ಲಿಂ ಯುವಕ ಸಮೀರ್ ಅವರಿಗೂ ಕೂಡ ಬಜರಂಗದಳ ಕಾರ್ಯಕರ್ತ ಶಿವಮೊಗ್ಗದ ಹರ್ಷಗೆ ನೀಡಿದಂತೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಕನ್ಯಾಡಿಯ ಮೃತ ದಿನೇಶ್ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿನೇಶ್ ಕೊಲೆ ಆಗಿದ್ದರಿಂದ ಕುಟುಂಬಕ್ಕೆ ಬಹಳ ತೊಂದರೆ ಆಗಿದೆ. ಸರ್ಕಾರ 4 ಲಕ್ಷ ಪರಿಹಾರ ಕೊಟ್ಟಿದೆ. ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಿದೆ. ದಿನೇಶ್ ಕುಟುಂಬಕ್ಕೂ 25 ಲಕ್ಷ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ನರಗುಂದದಲ್ಲಿ ಮುಸ್ಲಿಂ ಯುವಕನನ್ನು ಕೊಲೆ ಮಾಡಲಾಗಿದೆ. ಸರ್ಕಾರ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಿದೆ. ನರಗುಂದದ ಮುಸ್ಲಿಂ ಯುವಕ ಸಮೀರ್ಗೂ ಕೂಡ ₹25 ಲಕ್ಷ ಪರಿಹಾರ ನೀಡಬೇಕು. ಕೊಲೆ ಮಾಡಿದವರ ಮೇಲೆ ಸರಿಯಾದ ರೀತಿಯಲ್ಲಿ ಕಾನೂನು ಕ್ರಮ ಕೈಗೊಂಡು ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದರು.