ಪುತ್ತೂರು: ಕೋವಿಡ್ ಸೋಂಕು ಸಮಸ್ಯೆ ಎಲ್ಲೆಡೆ ತಾಂಡವಾಡುತ್ತಿದ್ದು, ಶಾಲೆ ಆರಂಭದ ಬಗ್ಗೆಯೂ ಸರ್ಕಾರ ಈವರೆಗೆ ನಿರ್ಧಾರ ಪ್ರಕಟಿಸಿಲ್ಲ. ಈ ನಡುವೆ ಪುತ್ತೂರು ಅಂಬಿಕಾ ವಿದ್ಯಾಲಯ ಕಾಲೇಜಿನ ಪ್ರಾಧ್ಯಾಪಕರು ಶಾಲೆಯಲ್ಲಿಯೇ ಆಹಾರೋದ್ಯಮ ಆರಂಭಿಸುವ ಮೂಲಕ ವಿನೂತನ ಪ್ರಯತ್ನ ಮಾಡಿದ್ದಾರೆ.
ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಆರ್ಥಿಕವಾಗಿ ದೊಡ್ಡ ಹೊಡೆತ ಬಿದ್ದಿದೆ. ಅದೇ ರೀತಿ ಶಿಕ್ಷಕರು, ಸಿಬ್ಬಂದಿ ವೇತನಕ್ಕೂ ಕುತ್ತು ಬಂದಿದೆ. ಈ ಆರ್ಥಿಕ ಸಂಕಷ್ಟವನ್ನು ನಿಭಾಯಿಸಲು ಪುತ್ತೂರು ಅಂಬಿಕಾ ವಿದ್ಯಾಲಯ ಶಾಲೆಯ ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿ ಶಿವಂ ಎಂಬ ಹೆಸರಿನಲ್ಲಿ ಆಹಾರ ಉತ್ಪಾದನೆ ಆರಂಭಿಸಿದ್ದಾರೆ. ಈ ಮೂಲಕ ವಿವಿಧ ಖಾದ್ಯಗಳನ್ನು ತಯಾರಿಸಿ, ಮಾರಾಟ ಮಾಡುವ ವಿಶಿಷ್ಟ ಪ್ರಯತ್ನ ಮಾಡಲಾಗುತ್ತಿದೆ.
ಪ್ರಾಧ್ಯಾಪಕ ಸತೀಶ್ ನೇತೃತ್ವದಲ್ಲಿ ಈ ತಂಡ ಒಗ್ಗೂಡಿ ಆಹಾರೋದ್ಯಮವನ್ನು ಆರಂಭಿಸಿದ್ದು, ಇದಕ್ಕೆ ಶಾಲಾ ಆಡಳಿತ ಮಂಡಳಿಯೂ ಸಾಥ್ ನೀಡಿದೆ. ಕಾಲೇಜಿನ ಕೊಠಡಿಯಲ್ಲಿಯೇ ಆಹಾರ ತಯಾರಿ ಕಾರ್ಯ ಮಾಡಲಾಗುತ್ತಿದೆ. ಸಾಕಷ್ಟು ಮುನ್ನೆಚ್ಚರಿಕೆ ಮೂಲಕ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿಯೇ ಆಹಾರ ತಯಾರಿ ಮಾಡಲಾಗುತ್ತಿದೆ. ಎಲ್ಲಾ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇಲ್ಲಿ ತಯಾರಿಸಲಾಗುವ ಎಲ್ಲಾ ಆಹಾರಗಳಿಗೂ ಕಾಲೇಜು ವಿದ್ಯಾರ್ಥಿಗಳ ಪೋಷಕರೇ ಗ್ರಾಹಕರು. ಬೇಡಿಕೆ ಹೆಚ್ಚಾದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಿಸುವ ಚಿಂತನೆ ಮಾಡಲಾಗಿದೆ. ಕಾಲೇಜಿನ ಎಲ್ಲಾ ಸಿಬ್ಬಂದಿ ಈ ಕಾರ್ಯದಲ್ಲಿ ಕೈಜೋಡಿಸಿದ್ದು, ಬರುವ ಆದಾಯವನ್ನು ತಮ್ಮ ತಮ್ಮೊಳಗೆ ಹಂಚಿಕೊಳ್ಳುವ ಬಗ್ಗೆ ನಿರ್ಧರಿಸಲಾಗಿದೆ.