ಸುಳ್ಯ(ದಕ್ಷಿಣ ಕನ್ನಡ): ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆಗೆ ಐದು ಪ್ರತ್ಯೇಕ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಪೊಲೀಸರು ಹಲವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳವಾರ ರಾತ್ರಿ ಕೆಲವು ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದರು. ಈ ಘಟನೆಯ ನಂತರ ಸುಳ್ಯ, ಕಡಬ ಹಾಗು ಪುತ್ತೂರು ತಾಲೂಕುಗಳಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಸೆಕ್ಷನ್ 144 ಜಾರಿ ಮಾಡಲಾಗಿದೆ. ಅಲ್ಲದೆ, ಪ್ರವೀಣ್ ಹತ್ಯೆಯು ವ್ಯವಸ್ಥಿತ ಸಂಚು. ಕೇರಳಕ್ಕೆ ಹೋಗಿಯೂ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಇನ್ನೊಂದೆಡೆ, ಕೊಲೆ ಆರೋಪಿಗಳು ಕೇರಳ ನೋಂದಣಿ ಸಂಖ್ಯೆಯ ಬೈಕ್ನಲ್ಲಿ ಆಗಮಿಸಿದ್ದಾರೆಂಬ ಗುಮಾನಿ ಇರುವುದರಿಂದ ತನಿಖೆಯನ್ನು ಕೇರಳ ಕಡೆಗೂ ಕೇಂದ್ರೀಕರಿಸಲಾಗಿದೆ ಎನ್ನಲಾಗ್ತಿದೆ.
ದೂರಿನಲ್ಲೇನಿದೆ: ಕೊಲೆ ಸಂಬಂಧ ಸ್ಥಳೀಯರೊಬ್ಬರು ನೀಡಿದ ದೂರಿನಂತೆ ಮೂರು ಜನ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಕೋಳಿ ಅಂಗಡಿಯಲ್ಲಿ ವ್ಯಾಪಾರ ಮುಗಿಸಿ ಬಾಗಿಲು ಹಾಕಿ ಹೊರಡಲು ಸಿದ್ಧತೆಯಲ್ಲಿದ್ದ ಪ್ರವೀಣ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿತ್ತು. ಬಳಿಕ ಮೂವರು ಅಪರಿಚಿತರು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಬೈಕ್ನಲ್ಲಿ ಪುತ್ತೂರು ಕಡೆಗೆ ಪರಾರಿಯಾಗಿದ್ದಾರೆ. ಕೂಡಲೇ ಆ್ಯಂಬುಲೆನ್ಸ್ ಮೂಲಕ ಪ್ರವೀಣ್ರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪುತ್ತೂರಿನಿಂದ ಬೆಳ್ಳಾರೆಗೆ ಪ್ರವೀಣ್ ನೆಟ್ಟಾರು ಶವಯಾತ್ರೆ; ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಾಗಿ