ಮಂಗಳೂರು: ನಗರದ ಉಳ್ಳಾಲ ಸಮೀಪದ ಸಮುದ್ರದಲ್ಲಿ ಮುಳುಗಿದ ಹಡಗಿಗೆ ಮೀನುಗಾರಿಕಾ ಬೋಟ್ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಈ ವೇಳೆ 11 ಮೀನುಗಾರರನ್ನು ರಕ್ಷಣೆ ಮಾಡಲಾಗಿದ್ದರೆ, ಓರ್ವ ಮೀನುಗಾರ ಕಣ್ಮರೆಯಾಗಿದ್ದಾನೆ.
ಆದ್ಯ ಎಂಬ ಹೆಸರಿನ ಆಳ ಸಮುದ್ರ ಮೀನುಗಾರಿಕಾ ಬೋಟ್ ಬೆಳಗ್ಗೆ 11 ಗಂಟೆ ಸುಮಾರಿಗೆ ಉಳ್ಳಾಲ ಸಮೀಪದ ಸಮುದ್ರದ ಮಧ್ಯೆ ಕೆಲವು ವರ್ಷಗಳ ಹಿಂದೆ ಮುಳುಗಿದ್ದ ಹಡಗಿಗೆ ಡಿಕ್ಕಿ ಹೊಡೆದಿದೆ. ಬೋಟ್ನಲ್ಲಿ 12 ಮಂದಿ ಮೀನುಗಾರರು ಇದ್ದರು. ಬೋಟ್ ಡಿಕ್ಕಿ ಹೊಡೆದ ಪರಿಣಾಮ ಮೀನುಗಾರರು ಸಮುದ್ರಕ್ಕೆ ಬಿದ್ದಿದ್ದು, 11 ಮೀನುಗಾರರನ್ನು ಸಮೀಪದಲ್ಲಿದ್ದ ಇತರ ಮೀನುಗಾರಿಕಾ ಬೋಟ್ನವರು ರಕ್ಷಿಸಿದ್ದಾರೆ. ತಮಿಳುನಾಡು ಮೂಲದ ಓರ್ವ ಮೀನುಗಾರ ಕಣ್ಮರೆಯಾಗಿದ್ದಾನೆ. ಕಣ್ಮರೆಯಾಗಿರುವ ಮೀನುಗಾರನ ಶೋಧ ಕಾರ್ಯ ಮುಂದುವರಿದಿದೆ.
ಹಲವು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಹಡಗೊಂದು ಮುಳುಗಿದ್ದು, ಅದನ್ನು ತೆರವುಗೊಳಿಸಲಾಗಿರಲಿಲ್ಲ. ಈ ಮುಳುಗಡೆಯಾಗಿರುವ ಹಡಗಿನ ಜಾಗದಲ್ಲಿ ಯಾವುದೇ ಗುರುತುಗಳು ಇಲ್ಲದೇ ಇರುವುದು ಮೀನುಗಾರಿಕಾ ಬೋಟ್ ಡಿಕ್ಕಿ ಹೊಡೆಯಲು ಕಾರಣ ಎಂದು ಹೇಳಲಾಗುತ್ತಿದೆ.
ಓದಿ: ಹೂಡಿಕೆ ಒಪ್ಪಂದ: ವಿವಿಧ ಕ್ಷೇತ್ರಗಳ ಪರಸ್ಪರ ಸಹಕಾರ ವ್ಯಕ್ತಪಡಿಸಿದ ಸಿಎಂ- ಬ್ರಿಟಿಷ್ ಹೈ ಕಮಿಷನರ್