ಮಂಗಳೂರು : ವರ್ಷಪೂರ್ತಿ ಹೇರಳ ಮತ್ಸ್ಯ ಲಭ್ಯವಾಗಲಿ ಎಂಬ ಪ್ರಾರ್ಥನೆಯೊಂದಿಗೆ ಮೊಗವೀರ ಬಂಧುಗಳು ನಗರದಲ್ಲಿ ಸಮುದ್ರಪೂಜೆ ಮಾಡಿದ್ದಾರೆ. ನಗರದ ತೋಟ ಬೆಂಗರೆಯಲ್ಲಿ ಮೊಗವೀರ ಬಂಧುಗಳು ಸಮುದ್ರರಾಜನಿಗೆ ಹಾಲಿನ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು.
ಮೊದಲಿಗೆ ಶ್ರೀ ಮಹಾವಿಷ್ಣು ಶೇಷಶಯನ ಮಂದಿರದಲ್ಲಿ ಭಜನೆ, ಪೂಜೆ ಮಾಡಿದರು. ನಂತರ ಕಡಲ ತೀರದಲ್ಲಿ ನೂರಾರು ಮಂದಿ ಮೊಗವೀರ ಬಂಧುಗಳು ಸೇರಿ ಸಮುದ್ರಕ್ಕೆ ಹಾಲು, ಸೀಯಾಳಾಭಿಷೇಕ ಅರ್ಪಿಸಿದರು.
ಮೀನುಗಾರರಿಗೆ ಸಮುದ್ರರಾಜನೇ ಅನ್ನದಾತ. ಆದ್ದರಿಂದ, ಈತನಿಗೆ ಮಣಿಯುವುದು ಹಿಂದಿನಿಂದಲೂ ಬಂದಿರುವ ಪದ್ಧತಿ. ಸಮುದ್ರರಾಜನಿಗೆ ಪೂಜೆ ಸಲ್ಲಿಸುವ ಮೂಲಕ ಆತನ ಒಡಲನ್ನು ತಂಪಾಗಿರಿಸುವ ನಂಬಿಕೆ ಕರಾವಳಿಯಲ್ಲಿ ಇಂದಿಗೂ ಜೀವಂತವಾಗಿದೆ.
ಮತ್ಸ್ಯಕ್ಕಾಗಿ ಪ್ರಾರ್ಥನೆ : ಮಳೆಗಾಲದಲ್ಲಿ ರೌದ್ರತೆಯಿಂದ ಕೂಡಿರುವ ಸಮುದ್ರಕ್ಕೆ ಮೀನುಗಾರಿಕೆ ನಡೆಸಲು ಹೋಗದೆ ಬೋಟ್ಗಳನ್ನು ದಡಕ್ಕೆ ತರಲಾಗುತ್ತದೆ. ಸುಮಾರು 2 ತಿಂಗಳ ರಜೆಯ ಬಳಿಕ ಮೀನುಗಾರಿಕೆ ಆರಂಭವಾಗುವ ಸಮಯದಲ್ಲಿ ಪ್ರಕ್ಷುಬ್ಧಗೊಂಡಿರುವ ಸಮುದ್ರವನ್ನು ಶಾಂತಗೊಳಿಸಲು ಹಾಲು, ಸೀಯಾಳ, ತೆಂಗಿನಕಾಯಿ ಮುಂತಾದ ವಸ್ತುಗಳನ್ನು ಅರ್ಪಿಸಿ ಮುಂದೆ ತಮಗೆ ಹೇರಳ ಮತ್ಸ್ಯ ಸಂಪತ್ತು ದೊರಕಲಿ ಎಂದು ಸಮುದ್ರ ಪೂಜೆ ಮಾಡುತ್ತಾರೆ. ಈ ದಿನದಂದು ಮೊಗವೀರ ಬಂಧುಗಳೆಲ್ಲಾ ಭಾಗವಹಿಸುತ್ತಾರೆ.
ವಿಶೇಷ ಹೋಮ-ಹವನ : ಈ ದಿನ ಮೊಗವೀರ ಬಂಧುಗಳೆಲ್ಲಾ ಕಡಲ ತೀರದಲ್ಲಿ ಸೇರಿಕೊಂಡು ವಿಶೇಷ ಹೋಮ-ಹವನ ಮಾಡಿ ಕಡಲ ಒಡಲು ತಂಪಾಗಿರಿಸಲು ಹಾಲಿನ ಅಭಿಷೇಕ ಮಾಡುತ್ತಾರೆ. ಜೊತೆಗೆ ಸೀಯಾಳಾಭಿಷೇಕ, ನೂರಾರು ತೆಂಗಿನಕಾಯಿಗಳನ್ನು ಕಡಲಿಗೆ ಅರ್ಪಣೆ ಮಾಡಿ ವರ್ಷಪೂರ್ತಿ ಉತ್ತಮ ಮೀನು ಸಂಪತ್ತು ನೀಡಬೇಕೆಂದು ಸಮುದ್ರರಾಜನಲ್ಲಿ ಪ್ರಾರ್ಥಿಸುತ್ತಾರೆ.
ಓದಿ : ನಾಳೆಯಿಂದ ಭೌತಿಕ ತರಗತಿಗಳು ಆರಂಭ: ಶಾಲಾ-ಕಾಲೇಜುಗಳಿಗೆ ಹೊಸ ಗೈಡ್ಲೈನ್ಸ್