ಮಂಗಳೂರು: ಹೊರ ರಾಜ್ಯಗಳಿಂದ ಸುಮಾರು ಶೇ.25 ರಷ್ಟು ಬೃಹತ್ ಲಾರಿಗಳಲ್ಲಿ ಮೀನುಗಳು ಮಾರಾಟಕ್ಕೆ ಮಂಗಳೂರಿಗೆ ಆಗಮಿಸುತ್ತಿವೆ. ಆದರೆ, ಸದ್ಯ ಲಾರಿಗಳಿಗೆ ತಂಗಲು ಸೂಕ್ತ ಸ್ಥಳಾವಕಾಶವಿರಲಿಲ್ಲ. ಹೀಗಾಗಿ ಹಳೆ ಬಂದರಿನಲ್ಲಿ ಶನಿವಾರ ರಾತ್ರಿಯಿಂದ ಚಿಲ್ಲರೆ ಮಾರಾಟಗಾರರಿಗೆ ಮೀನು ಅನ್‌ಲೋಡ್ ಮಾಡಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ನಗರದ ಹಳೆ ಬಂದರು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮುಂಜಾನೆ 3 ರಿಂದ ಬೆಳಗ್ಗೆ 8ರ ಒಳಗೆ ಈ ಪ್ರಕ್ರಿಯೆ ನಡೆಯಬೇಕು. ಟೆಂಪೋದಲ್ಲಿ ಬರುವ ಸಣ್ಣ ವ್ಯಾಪಾರಸ್ಥರಿಗೆ ಮಾತ್ರ ಇಲ್ಲಿಗೆ ಪ್ರವೇಶವಿದ್ದು ಸಾರ್ವಜನಿಕರಿಗೆ ಪ್ರವೇಶವಿಲ್ಲ. ಸಾಮಾಜಿಕ ಅಂತರ ಪಾಲಿಸಿಕೊಂಡು ಮಾರಾಟಗಾರರು ಇಲ್ಲಿಂದ ಮೀನು ಖರೀದಿಸಬಹುದು ಎಂದಿದ್ದಾರೆ.
ಬಳಿಕ ಸೆಂಟ್ರಲ್ ಮಾರುಕಟ್ಟೆ ಪುರಭವನದ ಬಳಿ, ಹಳೆಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಶಾಸಕರ ತಂಡ ತರಕಾರಿ, ಹಣ್ಣು ಮಾರಾಟ ಮಾಡುವವರಿಗೆ ನೀಡಬೇಕಾದ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭ ಶಾಸಕ ಯು.ಟಿ.ಖಾದರ್, ಮೇಯರ್ ದಿವಾಕರ್ ಪಾಂಡೇಶ್ವರ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಪೂರ್ಣಿಮಾ, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಜೀರ್, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಹರೀಶ್ ಕುಮಾರ್, ಸಹಾಯಕ ಉಪನಿರ್ದೇಶಕ ದಿಲೀಪ್ ಕುಮಾರ್ ಮಾಜಿ ಮೇಯರ್ ಅಶ್ರಫ್, ಮುಸ್ತಫಾ, ಇಬ್ರಾಹೀಂ ಇತರರು ಭಾಗಿಯಾಗಿದ್ದರು.