ಮಂಗಳೂರು: ಕರಾವಳಿ ಕರ್ನಾಟಕದ ಪ್ರಮುಖ ವಾಣಿಜ್ಯ ವಹಿವಾಟಾಗಿರುವ ಮತ್ಸೋದ್ಯಮದ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ. ಮೀನುಗಾರಿಕೆಗೆ ಹೊರಟ ಕಡಲ ಮಕ್ಕಳಿಗೆ ಸಮುದ್ರದಲ್ಲಿ ಮೀನುಗಳ ಅಲಭ್ಯತೆ ಭಾರಿ ನಷ್ಟ ಉಂಟು ಮಾಡುತ್ತಿದೆ. ಇದರ ಪರಿಣಾಮ ನೂರಾರು ಬೋಟ್‌ಗಳು ಮೀನುಗಾರಿಕಾ ಬಂದರಿನಲ್ಲಿ ಲಂಗರು ಹಾಕುತ್ತಿವೆ.
ಪಶ್ಚಿಮ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ , ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ಸೋದ್ಯಮದಿಂದ ವಾರ್ಷಿಕವಾಗಿ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ಆಗುತ್ತದೆ. ಮಂಗಳೂರಿನ ದಕ್ಕೆ ಮೂಲಕ 1,400 ಮೀನುಗಾರಿಕಾ ಬೋಟ್‌ಗಳು ಮೀನುಗಳ ಬೇಟೆಯಲ್ಲಿ ತೊಡಗಿವೆ. ಈ ಬಾರಿಯ ಮಳೆಗಾಲದ ಬಳಿಕ ಹೊಸ ಹುರುಪಿನಿಂದ ಮೀನುಗಾರಿಕೆಗೆ ಹೊರಟ ಈ ಬೋಟ್‌ಗಳು ನಿರಾಶೆಗೊಳಗಾಗಿವೆ. ಈ ಸಂದರ್ಭದಲ್ಲಿ ಹೆಚ್ಚು ಲಾಭ ತರುವ ಅಂಜಲ್, ಸಿಗಡಿ, ಮಾಂಜಿ ಮೊದಲಾದ ಮೀನುಗಳು ಬಲೆಗೆ ಬೀಳಬೇಕಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಇಂಥ ಮೀನುಗಳು ಬಲೆಗೆ ಬೀಳುತ್ತಿಲ್ಲ.
ಮೀನುಗಾರಿಕೆಗೆ ಹೊರಟ ಮೀನುಗಾರಿಕಾ ಬೋಟ್ಗಳಿಗೆ ಬಂಗುಡೆ, ಕೊಡ್ಡಾಯಿ ಮೀನುಗಳು ಸಿಗುತ್ತಿವೆ. ಆದರೆ ಇದರಿಂದ ಬೋಟ್ಗಳಿಗೆ ಲಾಭವಾಗುತ್ತಿಲ್ಲ. ಹೀಗಾಗಿ ಮೀನುಗಾರಿಕೆಗೆ ತೆರಳದೆ ನಷ್ಟವನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ. ಮಂಗಳೂರಿನ 1,400 ಬೋಟ್ಗಳಲ್ಲಿ ಅರ್ಧದಷ್ಟು ಮೀನುಗಾರಿಕಾ ಬೋಟ್‌ಗಳು ಮೀನುಗಾರಿಕೆಗೆ ತೆರಳದೆ ಬಂದರಿನಲ್ಲಿ ಲಂಗರು ಹಾಕಿವೆ.
ಬೋಟ್ ಮಾಲಕರ ಪ್ರತಿಕ್ರಿಯೆ: ಈ ಬಗ್ಗೆ ಮಾತನಾಡಿದ ಬೋಟ್ ಮಾಲಕ ಚೇತನ್ ಬೆಂಗ್ರೆ, "ಆರಂಭದಲ್ಲಿ ಚೆನ್ನಾಗಿ ನಡೆಯುತ್ತಿತ್ತು. ಕಳೆದ 15 ದಿನದಿಂದ ಮೀನುಗಾರಿಕಾ ಬೋಟ್‌ಗಳು ನಷ್ಟ ಅನುಭವಿಸುತ್ತಿವೆ. ಶೇ 50-60ರಷ್ಟು ಬೋಟ್‌ಗಳು ಮೀನುಗಾರಿಕೆ ನಿಲ್ಲಿಸಿವೆ. ಸರಿಯಾಗಿ ಮಳೆ ಇಲ್ಲದೆ, ತೂಫಾನ್ ಇಲ್ಲದೆ ಈ ಸಮಸ್ಯೆ ಎದುರಾಗಿದೆ. ಬೋಟ್ಗಳನ್ನು ಉಪಯೋಗಿಸುವ ಸಾಮಗ್ರಿಗಳ ದರ ಹೆಚ್ಚಾಗಿದೆ. ಆದರೆ ಮೀನಿನ ದರ ಕಡಿಮೆಯಾಗಿದೆ. ನಮಗೆ ಬೆಂಬಲ ಬೆಲೆ ಕೊಟ್ಟರೆ ಅನುಕೂಲವಾಗುತ್ತದೆ. ರೈತರಿಗೆ ನೀಡುವಂತೆ ಕಡಲ ಮಕ್ಕಳಿಗೆ ವ್ಯವಸ್ಥೆ ಮಾಡಬೇಕು" ಎಂದು ಹೇಳಿದರು.
ಮತ್ಸ್ಯಕ್ಷಾಮಕ್ಕೆ ಕಾರಣವೇನು?: ಮತ್ಸ್ಯಕ್ಷಾಮ ತಲೆದೋರಲು ಪ್ರಮುಖ ಕಾರಣ ಹವಾಮಾನ ವೈಪರೀತ್ಯ. ಈ ಬಾರಿ ಮಳೆಗಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ಮುಂಗಾರು ಕ್ಷೀಣಗೊಂಡಿದ್ದಲ್ಲದೆ, ಮೀನು ಸಂತತಿ ದಡದ ಬಳಿಗೆ ಬರಲು ಪೂರಕವಾಗುವಂತೆ ಸೈಕ್ಲೋನ್ ಬಾರದಿರುವುದು ಮತ್ಸ್ಯಕ್ಷಾಮಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇಷ್ಟು ಮಾತ್ರವಲ್ಲದೇ ಕೈಗಾರಿಕೆಗಳ ಕಲುಷಿತ ನೀರು ಸೇರಿದಂತೆ ಹಲವಾರು ಕಾರಣಗಳಿಂದ ಸಮುದ್ರ ಮಲಿನವಾಗುತ್ತಿದೆ. ಅಲ್ಲದೆ ಅವೈಜ್ಞಾನಿಕ ಮೀನುಗಾರಿಕೆ ಮತ್ತ್ಯಕ್ಷಾಮಕ್ಕೆ ಕಾರಣವಾಗುತ್ತಿದೆ.
ಜೂನ್, ಜುಲೈನಲ್ಲಿ ಎರಡು ತಿಂಗಳ ಆಳಸಮುದ್ರ ಮೀನುಗಾರಿಕೆ ಸ್ಥಗಿತದ ಬಳಿಕ ಆಗಸ್ಟ್‌ನಿಂದ ಮೀನು ಹೇರಳವಾಗಿ ಸಿಗುವ ಕಾಲ. ಅದರಲ್ಲೂ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಯಥೇಚ್ಛವಾಗಿ ಮೀನುಗಳು ಸಿಗುವ ಸಮಯ. ಆದರೆ ಈ ಅವಧಿಯಲ್ಲೇ ಮತ್ಸಕ್ಷಾಮ ಎದುರಾಗಿರುವುದು ಮೀನುಗಾರರಲ್ಲಿ ಮಾತ್ರವಲ್ಲದೆ, ಮೀನುಗಾರಿಕೆಯನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳನ್ನು ಆತಂಕಕ್ಕೆ ತಳ್ಳಿದೆ.
ಇದನ್ನೂ ಓದಿ: ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಅಭಿವೃದ್ಧಿಗೆ ಆದ್ಯತೆ: ಸಚಿವ ಮಂಕಾಳ್ ವೈದ್ಯ