ಮಂಗಳೂರು: ಉಳ್ಳಾಲ ಉಗ್ರರ ಸ್ಲೀಪರ್ ಸೆಲ್ ಆಗಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರತೀಕಾರವಾಗಿ ನಮ್ಮ ಹುಡುಗರು ಸುರತ್ಕಲ್ಗೆ ನುಗ್ಗಿ ಹೊಡೆದಿದ್ದಾರೆ. ಹಿಂದೂಗಳ ತಂಟೆಗೆ ಬಂದರೆ ನಾವು ಸುಮ್ಮನಿರಲ್ಲ ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ವಿವಾದಿತ ಹೇಳಿಕೆ ನೀಡಿದ್ದಾರೆ.
ತುಮಕೂರಲ್ಲಿ ನಡೆದ ಶೌರ್ಯ ಯಾತ್ರೆಯಲ್ಲಿ ಗುಜರಾತ್ನಲ್ಲಿ ನಡೆದ ಕೊಲೆಗಳು, ಹಿಂದೂ ಕರಸೇವಕರ ಹತ್ಯೆಗೆ ನಡೆದ ಪ್ರತೀಕಾರ ಎಂದು ಹೇಳಿದ್ದ ಶರಣ್ ಉಳ್ಳಾಲದಲ್ಲೂ ಅದನ್ನು ಮತ್ತೆ ಸಮರ್ಥಿಸಿದ್ದಲ್ಲದೇ ಪ್ರವೀಣ್ ನೆಟ್ಟಾರು ಹತ್ಯೆ ಪ್ರತೀಕಾರಕ್ಕಾಗಿಯೇ ನಮ್ಮ ಯುವಕರು ಸುರತ್ಕಲ್ನಲ್ಲಿ ನುಗ್ಗಿ ಹೊಡೆದಿದ್ದಾರೆ ಎಂದಿದ್ದಾರೆ.
ಉಳ್ಳಾಲ ಬೈಲಿನಲ್ಲಿ ಮಂಗಳೂರು ವಿಶ್ವ ಹಿಂದೂ ಪರಿಷತ್, ಬಜರಂಗದಳದ ನೆರಳಲ್ಲಿ ನಡೆದ ಶೌರ್ಯ ಯಾತ್ರೆ ಉದ್ದೇಶಿಸಿ ಅವರು ಮಾತನಾಡಿದರು. ಉಳ್ಳಾಲದಲ್ಲಿ ನಿತ್ಯ ನಿರಂತರ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿವೆ. ಮಾಜಿ ಶಾಸಕ ಇದಿನಬ್ಬರ ಮೊಮ್ಮಗನ ಪತ್ನಿ ದೀಪ್ತಿ ಅಲಿಯಾಸ್ ಮರಿಯಮ್ ಸಿರಿಯಾ ಭಯೋತ್ಪಾದಕರ ನಂಟಿನ ಹಿನ್ನೆಲೆಯಲ್ಲಿ ಎನ್ಐಎ ವಶದಲ್ಲಿದ್ದಾರೆ. ಮೊನ್ನೆ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲೂ ಉಳ್ಳಾಲದ ನಡುವಿನ ಪಿ. ಎ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಲ್ಲದೇ ಬಬ್ಬುಕಟ್ಟೆಯ ವ್ಯಕ್ತಿಯನ್ನು ಎನ್ಐಎ ಬಂಧಿಸಿತ್ತು. 2047 ರಲ್ಲಿ ಭಾರತವನ್ನ ಇಸ್ಲಾಮಿಕ್ ರಾಷ್ಟ್ರವನ್ನಾಗಿಸಲು ಷಡ್ಯಂತ್ರ ಮಾಡಿದವರಿಗೆ ಕರ್ನಾಟಕದಲ್ಲಿ ಉಳ್ಳಾಲವೇ ಮೊದಲ ಟಾರ್ಗೆಟ್ ಆಗಿದೆ. ಹಾಗಾಗಿ ನಾವು ಮಂಗಳೂರಲ್ಲಿ ಎನ್ಐಎ ಘಟಕ ತೆರೆಯಲು ಒತ್ತಾಯಿಸಿದ್ದೇವೆ ಎಂದರು.
ಶರಣ್ ಪಂಪ್ವೆಲ್ ವಿರುದ್ದ ಮೃತ ಫಾಜಿಲ್ ತಂದೆ ದೂರು: ತುಮಕೂರು ಹಾಗೂ ಉಳ್ಳಾಲದಲ್ಲಿ ಬಜರಂಗದಳದ ನೇತೃತ್ವದಲ್ಲಿ ನಡೆದ ಶೌರ್ಯ ಯಾತ್ರೆಯಲ್ಲಿ ಸುರತ್ಕಲ್ ಫಾಜಿಲ್ ಹತ್ಯೆಯನ್ನು ಸಮರ್ಥಿಸಿ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿಕೆ ನೀಡಿದ್ದರು. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಫಾಜಿಲ್ ತಂದೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ನೀಡುವಂತೆ ಫಾಜಿಲ್ ತಂದೆಗೆ ಸೂಚನೆಯನ್ನು ನೀಡಿದ್ದಾರೆ. ಅಲ್ಲದೇ ಪ್ರಕರಣದ ಬಗ್ಗೆ ಕಾನೂನು ಸಲಹೆ ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದು ಅವರಿಗೆ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಫಾಜಿಲ್ ತಂದೆ ಉಮರ್ ಫಾರೂಕ್ ಅವರು, ’’ನಿನ್ನೆ ಅವರು ತುಮಕೂರಿನಲ್ಲಿ ಬಹಿರಂಗವಾಗಿ ನನ್ನ ಮಗನನ್ನು ಸಾಯಿಸಿದ ಬಗ್ಗೆ ಹೇಳಿದ್ದಾರೆ. ಈ ಕೊಲೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುವಂತೆ ಹಿಂದೆಯೂ ಹೇಳಿದ್ದೆ. ಎಡಿಜಿಪಿ ಅಲೋಕ್ ಕುಮಾರ್ ಅವರಿಗೂ ಹೇಳಿದ್ದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ನಿನ್ನೆ ಗೊತ್ತಾಗಿದೆ. ಮಂಗಳೂರು ಪೊಲೀಸ್ ಕಮೀಷನರ್ಗೆ, ಎಡಿಜಿಪಿ, ಡಿಜಿಪಿ ಅವರಿಗೆ ಮನವಿ ನೀಡಿದ್ದೇನೆ. ಫಾಜಿಲ್ ಪ್ರಕಾರ, ತನಿಖೆ ಮಾಡುತ್ತಿದ್ದ ಅಧಿಕಾರಿ ವರ್ಗಾವಣೆಯಾಗಿದ್ದು, ಹೊಸ ತನಿಖಾಧಿಕಾರಿಗಳನ್ನು ಭೇಟಿ ಮಾಡುತ್ತೇನೆ‘‘ ಎಂದರು.
ಓದಿ : ಕಸ್ಟಡಿ ಅವಧಿ ಮುಕ್ತಾಯಕ್ಕೂ ಮುನ್ನವೇ ಸ್ಯಾಂಟ್ರೋ ರವಿ ನ್ಯಾಯಾಂಗ ಬಂಧನಕ್ಕೆ