ಪುತ್ತೂರು(ದಕ್ಷಿಣ ಕನ್ನಡ): ಹಥ್ರಾಸ್ ಘಟನೆ ವಿರೋಧಿಸಿ ಪ್ರತಿಭಟಿಸಿದ್ದ ಎಸ್ಡಿಪಿಐ ಮುಖಂಡನ ಮಗನೇ ದಲಿತ ಯುವತಿ ಮೇಲೆ ದೌರ್ಜನ್ಯ ನಡೆಸಿ ಜೈಲು ಪಾಲಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಚಿಕ್ಕಮಡ್ನೂರು ಗ್ರಾಮದ ಎಸ್ಡಿಪಿಐ ಮುಖಂಡ ಅಬ್ದುಲ್ ಹಮೀದ್ ಸಾಲ್ಮರ ಎಂಬುವರ ಪುತ್ರ ಮಹ್ಮದ್ ಫೈಜಲ್ ಬಂಧಿತ ಆರೋಪಿಯಾಗಿದ್ದಾನೆ.
ಫೈಜಲ್ ಇನ್ಸ್ಟಾಗ್ರಾಂ ಮೂಲಕ ಆಂಧ್ರ ಮೂಲದ ದಲಿತ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಪರಿಚಯ ಪ್ರೇಮವಾಗಿ, ಮದುವೆ ಆಗುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ. ಯುವತಿ ಮದುವೆಯಾಗುವಂತೆ ಪಟ್ಟು ಹಿಡಿದ ವೇಳೆ, ಫೈಜಲ್ ತನ್ನ ಅಸಲಿ ಬಣ್ಣ ತೋರಿಸಿದ್ದಾನೆ. ಆಕೆಯ ಜತೆ ಇದ್ದ ನಗ್ನ ಫೋಟೋಗಳನ್ನ ಜಾಲತಾಣಗಳಿಗೆ ಅಪ್ಲೋಡ್ ಮಾಡ್ತೀನಿ ಅಂತಾ ಬೆದರಿಕೆ ಹಾಕಿ, ಹಣಕ್ಕೆ ಬೇಡಿಕೆ ಇಟ್ಟಿದ್ದನಂತೆ. ಇದರಿಂದ ಬೇಸತ್ತ ಯುವತಿ ಹೈದರಾಬಾದ್ನ ಎಲ್.ಬಿ.ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಳು. ಈ ಹಿನ್ನೆಲೆ ಅಕ್ಟೋಬರ್ 4 ರಂದು ಆಂಧ್ರ ಪೊಲೀಸರು ಈತನನ್ನ ಬಂಧಿಸಿ ಕರೆದೊಯ್ದಿದ್ದಾರೆ.
ಚೆನ್ನೈನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದ ಫೈಜಲ್ ಯುವತಿ ಜತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದು, ಆಕೆಯಿಂದಲೇ ಹಣ ಪಡೆಯುತ್ತಿದ್ದುದರ ಬಗ್ಗೆಯೂ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ ವಂಚನೆ ಪ್ರಕರಣದಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇಷ್ಟೆಲ್ಲ ಪ್ರಕರಣಗಳು ನಡೆದ್ರೂ, ಮಗನ ವಿಚಾರ ಗುಟ್ಟಾಗಿಟ್ಟು, ಮತ್ತೊಂದು ಯುವತಿಗೆ ಅನ್ಯಾಯವಾಗಿದೆ ಅಂತಾ ಆರೋಪಿ ತಂದೆ, ಎಸ್ಡಿಪಿಐ ಮುಖಂಡ ಅಬ್ದುಲ್ ಹಮೀದ್ ಸಾಲ್ಮರ ಪ್ರತಿಭಟನೆ ನಡೆಸಿರೋದು ನಗೆಪಾಟಲಿಗೆ ಕಾರಣವಾಗಿದೆ.
ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಎಸ್ಡಿಪಿಐ ಮುಖಂಡ ಸಿದ್ಧಿಕ್, ಈ ಯಾವ ವಿಚಾರವೂ ಹಮೀದ್ಗೆ ತಿಳಿದಿಲ್ಲ. ಈ ಘಟನೆಗೂ ಉತ್ತರಪ್ರದೇಶದ ಘಟನೆಗೂ ಸಂಬಂಧ ಕಲ್ಪಿಸೋದು ಬೇಡ ಎಂದಿದ್ದಾರೆ.