ಮಂಗಳೂರು: ಶಂಕಿತ ಉಗ್ರ ಚಟುವಟಿಕೆ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸರಿಂದ ಬಂಧಿತನಾಗಿದ್ದ ಮಾಝ್ ತಂದೆ ಮುನೀರ್ ಅಹಮದ್(52) ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಂಜೆ ಸಾವನ್ನಪ್ಪಿದ್ದಾರೆ.
ಮಗನ ಬಂಧನ ಬಳಿಕ ತಂದೆಗೆ ಹೃದಯಾಘಾತ: ಮಗ ಮಾಝ್ ಬಂಧನವಾದ ಬಳಿಕ ಮಾನಸಿಕವಾಗಿ ಮುನೀರ್ ಅಹಮದ್ ಕುಗ್ಗಿದ್ದರು ಎನ್ನಲಾಗಿದೆ. ಇಂದು ಸಂಜೆ ವೇಳೆ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಉಗ್ರ ಸಂಘಟನೆಯಲ್ಲಿ ತೊಡಗಿಕೊಂಡಿರುವ ಆರೋಪ ಹಾಗೂ ತುಂಗಾ ನದಿ ದಂಡೆಯ ಮೇಲೆ ಬಾಂಬ್ ತಯಾರಿಸಿ ಅದನ್ನು ನದಿಗೆ ಎಸೆಯುತ್ತಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಮಾಝ್ ಮತ್ತು ಶಿವಮೊಗ್ಗದ ಸೈಯದ್ ಯಾಸೀನ್ ಎಂಬುವವರನ್ನು ಶಿವಮೊಗ್ಗ ಪೊಲೀಸರು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.
ಇನ್ನು ಶಂಕಿತರು ಬಾಂಬ್ ತಯಾರಿಸಿ ಟ್ರಯಲ್ ಬ್ಲಾಸ್ಟ್ ಕೂಡ ಮಾಡಿದ್ದರು. ಮುಂದೆಯೂ ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎಂದು ಶಿವಮೊಗ್ಗ ಎಸ್ಪಿ ಮಾಹಿತಿ ನೀಡಿದ್ದಾರೆ.
(ಇದನ್ನೂ ಓದಿ: ಶಿವಮೊಗ್ಗಕ್ಕೆ ಉಗ್ರರ ನಂಟು, ಇಬ್ಬರ ವಿರುದ್ಧ ಯುಎಪಿಎ ಕೇಸ್ ದಾಖಲು : ಎಸ್ಪಿ ಲಕ್ಷ್ಮೀ ಪ್ರಸಾದ್)