ಮಂಗಳೂರು: ಸಾಂಪ್ರದಾಯಿಕ ಕೃಷಿಯೊಂದಿಗೆ ವಾಣಿಜ್ಯ ಬೆಳೆ ಬೆಳೆದು ಅದೆಷ್ಟೋ ಕೃಷಿಕರು ಯಶಸ್ವಿಯಾಗಿದ್ದಾರೆ. ಇಲ್ಲೊಬ್ಬ ಕೃಷಿಕ ಮಕ್ಕಳು ಇಷ್ಟಪಟ್ಟಿದ್ದ ಹಣ್ಣಿನ ಕೃಷಿಯನ್ನೇ ಮಾಡಿ ಯಶಸ್ವಿಯಾಗಿದ್ದಾರೆ.
ಕೃಷಿ ಕುಟುಂಬದಲ್ಲೇ ಹುಟ್ಟಿ, ಕೃಷಿಯನ್ನೇ ಬದುಕಾಗಿಸುವ ಮೂಲಕ ಕಳೆದ 8 ವರ್ಷದ ಹಿಂದೆ ಆರಂಭಿಸಿದ ಈ ಕೃಷಿ ಇಂದು ಅವರ ಜೀವನಕ್ಕೆ ಆಧಾರವಾಗಿದೆ. ಪಜೀರು ಗ್ರಾಮದ ಗುಂಡ್ಯ ಪ್ರಗತಿಪರ ಕೃಷಿಕ ಗುರುವಪ್ಪ ಗಟ್ಟಿ ಅವರ ಪುತ್ರ ಚಂದ್ರಶೇಖರ ಗಟ್ಟಿ ಗುಂಡ್ಯ ಅವರು ರಂಬೂಟನ್ (ಮಲೇಷ್ಯಾ - ಇಂಡೋನೇಷ್ಯಾ)ಮೂಲದ ಹಣ್ಣು ಬೆಳೆದು ಯಶಸ್ವಿಯಾದ ಕೃಷಿಕ. ತನ್ನ 5 ಎಕರೆ ಖಾಲಿ ಜಾಗದಲ್ಲಿ ರಂಬೂಟನ್ ಕೃಷಿ ಮಾಡಿ ಯಶಸ್ವಿಯಾಗಿದ್ದು, ನಾಲ್ಕು ಜನರಿಗೆ ಉದ್ಯೋಗವಕಾಶ ಕಲ್ಪಿಸಿದ್ದಾರೆ.
ಇವರು ಪ್ರಗತಿಪರ ಕೃಷಿಕರಾಗಿದ್ದು, ತಮ್ಮ ಮಕ್ಕಳನ್ನು ಜಿಲ್ಲೆಯ ವಿವಿಧೆಡೆ ಕೃಷಿ ಕಾರ್ಯಕ್ಷೇತ್ರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಒಂದು ಫಾರ್ಮ್‍ನಲ್ಲಿ ರಂಬೂಟನ್ ಹಣ್ಣು ಮಾರಾಟಕ್ಕಿಟ್ಟಿದ್ದು ಮಕ್ಕಳಿಗೆ ತೆಗೆಸಿಕೊಟ್ಟಿದ್ದರು. ಬಳಿಕ ಮಕ್ಕಳು ಅದೇ ಹಣ್ಣು ಬೇಕು ಎಂದು ಹಟ ಹಿಡಿದಾಗ ಪ್ರತೀ ಬಾರಿ ಖರೀದಿಸುವುದಕ್ಕಿಂತ ಆ ಗಿಡವನ್ನೇ ಬೆಳೆದರೆ ಹೇಗೆ ಎಂದು ಯೋಚಿಸಿ ಆ ಹಣ್ಣಿನ ಕೃಷಿ ಆರಂಭಿಸಿದರು.
ಸಾಮಾನ್ಯ ತೆಂಗು ಅಡಕೆ ತೋಟದಲ್ಲೂ ರಂಬೂಟನ್ ಬೆಳೆದಿರುವ ಅವರು, ತನ್ನ ತೋಟದಲ್ಲಿ ಮ್ಯಾಂಗೋಸ್ಟಿನ್, 10 ವಿವಿಧ ತಳಿಯ ಹಲಸಿನ ಗಿಡ, ಚೆರಿ, ಜಂಬು ನೇರಳ ಸೇರಿದಂತೆ ವಿವಿಧ ತರಹದ ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ. ಗಿಡದ ಆರೈಕೆಯ ವೆಚ್ಚವೂ ಕಡಿಮೆಯಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದ್ದು, ವ್ಯಾಪಾರಿಗಳು ಮನೆಗೆ ಬಂದು ಖರೀದಿಸುತ್ತಾರೆ ಎನ್ನುತ್ತಾರೆ ಚಂದ್ರಶೇಖರ ಗಟ್ಟಿ ಅವರು.
ಹಕ್ಕಿಗಳಿಗೆ ಆಹಾರ: ರಂಬೂಟನ್ ವ್ಯವಹಾರಿಕವಾಗಿ ಬೆಳೆದರೆ ಇದರೊಂದಿಗೆ ಬೆಳೆದಿರುವ ಇತರ ಹಣ್ಣು ಹಂಪಲುಗಳನ್ನು ಹಕ್ಕಿಗಳಿಗೆ ಆಹಾರವಾಗಿ ಗಿಡದಲ್ಲೇ ಬಿಡುತ್ತಿದ್ದಾರೆ. ಹಣ್ಣು - ಹಂಪಲು ತಿನ್ನುವುದಕ್ಕೆ ಇವರ ತೋಟದಲ್ಲಿ ಹಕ್ಕಿಗಳ ಹಿಂಡು ಸಾಮಾನ್ಯವಾಗಿರುತ್ತದೆ. ಕೃಷಿ ಸಮ್ಮೇಳನ ಸೇರಿದಂತೆ ರಾಜ್ಯದಲ್ಲಿರುವ ಹೆಚ್ಚಿನ ಕೃಷಿ ಕಾರ್ಯಕ್ಷೇತ್ರಕ್ಕೆ ಭೇಟಿ ನೀಡುವ ಇವರು, ಅಲ್ಲಿ ದೊರಕುವ ಹಣ್ಣಿನ ಗಿಡಗಳನ್ನು ತಂದು ಬೆಳೆಯುವ ಮೂಲಕ ಇಲ್ಲಿನ ಹವಾಗುಣಕ್ಕೆ ಯಾವ ರೀತಿಯ ಹಣ್ಣು ಬೆಳೆಯಬಹುದು ಎನ್ನುವ ಮಾಹಿತಿಯನ್ನು ಜನರಿಗೆ ನೀಡುತ್ತಾರೆ.
ವರ್ಷಕ್ಕೆ 12- 15 ಲಕ್ಷ ರೂ ಆದಾಯ:
ರಂಬೂಟನ್ ಹಣ್ಣಿನ ಕೃಷಿ ಮೂಲಕ ವರ್ಷಕ್ಕೆ ಅಂದಾಜು 12-15 ಲಕ್ಷ ರೂ. ಆದಾಯ ಬಂದಿದೆ ಎಂದು ರೈತ ಚಂದ್ರಶೇಖರ್ ಹೇಳುತ್ತಾರೆ. ರಂಬೂಟನ್ ಹಣ್ಣಿನ ಜತೆ ಇತರ ಹಣ್ಣಿನ ಗಿಡಗಳನ್ನ ನೆಟ್ಟಿದ್ದು, ಅದನ್ನ ಅವರು ಮಾರಾಟ ಮಾಡುವುದಿಲ್ಲವಂತೆ.