ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರ್ ಹೆಸರಿನಲ್ಲಿ ನಕಲಿ ವಾಟ್ಸ್ಆ್ಯಪ್ ಖಾತೆ ಸೃಷ್ಟಿಸಿ ವಂಚನೆಗೆ ಯತ್ನಿಸಿರುವ ಘಟನೆ ನಡೆದಿದೆ.
8319051976 ನಂಬರ್ ಮೂಲಕ ಪೊಲೀಸ್ ಕಮಿಷನರ್ ಅನುಪಮ್ ಅಗರ್ ವಾಲ್ ಅವರ ಹೆಸರಿನಲ್ಲಿ ವಂಚಕರು ವಾಟ್ಸ್ಆ್ಯಪ್ ಖಾತೆಯನ್ನು ಸೃಷ್ಟಿಸಿ, ಡಿಪಿಯಲ್ಲಿ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಅವರ ಭಾವಚಿತ್ರ ಹಾಕಿದ್ದಾರೆ.
ಈ ರೀತಿ ವಾಟ್ಸಪ್ ಖಾತೆ ಸೃಷ್ಟಿಸಿದ ವಂಚಕರು, ’’Hi sir Good Morning I'm COMMISSIONER ANUPAM AGRAWAL IPS
Today is the first time I have some work for you, don't refuse. If you ever need anything in your life, let me know. ಎಂಬ ಸಂದೇಶವನ್ನು ಕಳುಹಿಸಿದ್ದಾರೆ. ಆ ಬಳಿಕ Sir I'm in hospital And my upi is not working i need some money can you transfer i will return within 1 hour‘‘ ಎಂದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ನಾನು ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್, ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ನನ್ನ UPI ಕಾರ್ಯನಿರ್ವಹಿಸುತ್ತಿಲ್ಲ. ತುರ್ತಾಗಿ ಹಣ ಬೇಕಾಗಿದ್ದು, ಹಣ ವರ್ಗಾವಣೆ ಮಾಡಿ, ನಾನು ಒಂದು ಗಂಟೆಯೊಳಗೆ ವಾಪಸ್ ಹಣ ಹಾಕುವುದಾಗಿ ಹೇಳಿರುವ ಮೆಸೇಜ್ ಅನ್ನು ಮಂಗಳೂರಿನ ಹಲವರಿಗೆ ಕಳುಹಿಸಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ ವಾಲ್ ಅವರು ಇದೊಂದು ನಕಲಿ ಕರೆಯಾಗಿದ್ದು, ಯಾರು ಸ್ಪಂದಿಸಬೇಡಿ ಎಂದು ತಿಳಿಸಿದ್ದಾರೆ.
ಮಲಗಿದ್ದ ಮಹಿಳೆಗೆ ಕಿರುಕುಳ ನೀಡಿದ್ದ ಆರೋಪಿ ಸೆರೆ: ಮನೆಗೆ ಅಕ್ರಮ ಪ್ರವೇಶ ಮಾಡಿ ಮಲಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ಗುರುವಾರ ಬಂಧಿಸಿದ್ದರು. ಉಳ್ಳಾಲ ತಾಲೂಕಿನ ಹರೇಕಳದ ನೌಫಾಲ್ ಬಂಧಿತ ಆರೋಪಿ. ಅಕ್ಟೋಬರ್ 25 ರಂದು ಮಹಿಳೆ ತನ್ನ ಮಕ್ಕಳೊಂದಿಗೆ ಮಲಗಿದ್ದ ವೇಳೆ ಘಟನೆ ನಡೆದಿತ್ತು.
ಮಹಿಳೆ ರಾತ್ರಿ 11 ಗಂಟೆ ಸಮಯಕ್ಕೆ ಊಟ ಮುಗಿಸಿ ತಮ್ಮ ಬೆಡ್ ರೂಮ್ನಲ್ಲಿ ಮಲಗಿದ್ದು, ರಾತ್ರಿ ಸುಮಾರು 12.10 ಗಂಟೆಯ ಸಮಯಕ್ಕೆ ಅವರ ಕಾಲು ಮತ್ತು ಕೈಯನ್ನು ಯಾರೋ ಸವರಿದಂತಾಗಿದೆ. ಕೂಡಲೇ ಎದ್ದು ಲೈಟ್ ಹಾಕಿ ನೋಡಿದಾಗ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿದ್ದ ನೌಫಾಲ್ನು ಮಂಚದ ಕೆಳಗಿನಿಂದ ಎದ್ದು ಹಿಂಬಾಗಿನಿಂದ ಪರಾರಿಯಾಗಿದ್ದ. ಈ ಬಗ್ಗೆ ಮಹಿಳೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದರು.