ಮಂಗಳೂರು:ಭಾರತೀಯ ಸೇನೆಯ ಜೂನಿಯರ್ ಕಮೀಷನ್ಡ್ ಆಫೀಸರ್ ಎಂದು ಪರಿಚಯಿಸಿಕೊಂಡು ವಂಚಿಸುತ್ತಿದ್ದ ಆರೋಪಿಯನ್ನು ಮಿಲಿಟರಿ ಗುಪ್ತಚರ ಇಲಾಖೆ ಅಧಿಕಾರಿಗಳು ಮತ್ತು ಮಂಗಳೂರು ಉತ್ತರ ಎಸಿಪಿ ನೇತೃತ್ವದ ತಂಡ ಬಂಧಿಸಿದೆ.
ಸುರತ್ಕಲ್ ಸಮೀಪದ ಶ್ರೀಕೃಷ್ಣ ಎಸ್ಟೇಟ್ ನಿವಾಸಿ ಮಂಜುನಾಥ ರೆಡ್ಡಿ ಬಂಧಿತ ಆರೋಪಿ. ಈತ ಭಾರತೀಯ ಸೇನೆಯ ಜೂನಿಯರ್ ಕಮೀಷನ್ಡ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಕಾರ್ಯಕ್ರಮ ಆಯೋಜಿಸುತ್ತಾ, ಸಾರ್ವಜನಿಕರನ್ನು ವಂಚಿಸುತ್ತಿದ್ದನು. ಭಾರತೀಯ ಸೇನಾ ಗುಪ್ತದಳದ ಅಧಿಕಾರಿಗಳು ಮತ್ತು ಮಂಗಳೂರು ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತೀಯ ಸೇನೆಯ ದಕ್ಷಿಣ ಕಮಾಂಡ್ ಲಯೇಷನ್ ಘಟಕದ ಗುಪ್ತದಳದ ಅಧಿಕಾರಿ ಮೇಜರ್ ಸ್ವಾತಿ ಧಾರವಾಡ್ಕರ್ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀನಿವಾಸ ಗೌಡ ನೇತೃತ್ವದ ತಂಡ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಮಂಜುನಾಥ್ ರೆಡ್ಡಿ ಸುರತ್ಕಲ್‌ನ ಕೃಷ್ಣ ಎಸ್ಟೇಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಭಾರತೀಯ ಸೇನೆಯ ಅಧಿಕಾರಿ ಎಂದು ಬಿಂಬಿಸಿಕೊಳ್ಳುತ್ತಿದ್ದ ಈತ, ಸೇನಾ ಸಮವಸ್ತ್ರ ಧರಿಸಿ ಓಡಾಡುತ್ತಿದ್ದ. ಹುತಾತ್ಮ ಯೋಧರ ಕುಟುಂಬದವರಿಗೆ ಸನ್ಮಾನ ಸಮಾರಂಭಗಳನ್ನು ಆಯೋಜಿಸುತ್ತಿದ್ದ. ಈ ಮೂಲಕ ಅವರ ವಿಶ್ವಾಸ ಗಳಿಸಿ, ಸೇನೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಡೆದು ವಂಚನೆಗೈಯುತ್ತಿದ್ದ.
ಬಂಧಿತ ಆರೋಪಿ ಮಂಜುನಾಥ್ ರೆಡ್ಡಿಯಿಂದ ಸೇನಾ ಸಿಬ್ಬಂದಿಯ ಸಮವಸ್ತ್ರ, ನಕಲಿ ಗುರುತಿನ ಚೀಟಿಗಳು, ಸೇನೆಯ ಹೆಸರಿನಲ್ಲಿರುವ ನಕಲಿ ರಬ್ಬರ್ ಸ್ಟಾಂಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯು ಹಿಂದೆ ಬೆಳಗಾವಿಯ ಮರಾಠಾ ಲಘು ಪದಾತಿದಳದ ಘಟಕದಲ್ಲಿ ಸಿವಿಲ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಸೇನೆಯಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ ಹಲವು ಮಂದಿಯನ್ನು ವಂಚಿಸಿರುವ ಸಾಧ್ಯತೆ ಹಿನ್ನೆಲೆ ತನಿಖೆ ನಡೆಯುತ್ತಿದೆ.
ಈತನ ಹಿಂದೆ ಬೃಹತ್ ವಂಚಕ ಜಾಲವೇ ಇರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದ್ದು, ಪೊಲೀಸರು ಮತ್ತು ಸೇನಾ ಗುಪ್ತದಳ ತನಿಖೆ ಮುಂದುವರಿಸಿವೆ. ಸೇನೆಯಲ್ಲಿ ಯಾವುದೇ ರೀತಿಯ ನೇಮಕಾತಿಗಳಿಗೆ ಯಾರಿಂದಲೂ ಹಣ ಸಂಗ್ರಹಿಸಲಾಗುವುದಿಲ್ಲ. ಮಧ್ಯವರ್ತಿಗಳ ಹಾವಳಿಗೂ ಅವಕಾಶವಿಲ್ಲ. ಈ ಕುರಿತು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.