ಮಂಗಳೂರು: ನಗರದ ಅಡ್ಯಾರ್ ಕಣ್ಣೂರಿನಲ್ಲಿ ಜನವರಿ 15ರಂದು ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾ ಸಮಾವೇಶದಲ್ಲಿ ಗೃಹ ಸಚಿವ ಅಮಿತ್ ಶಾ, ಸಿಎಂ ಯಡಿಯೂರಪ್ಪ ವಿರುದ್ಧ ಹಾಗೂ ಪೊಲೀಸರ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿರುವವರ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಅಡ್ಯಾರ್ ಕಣ್ಣೂರು ಶಹಾ ಗಾರ್ಡನ್ ನಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಕಮಿಟಿಯ ವತಿಯಿಂದ ಬೃಹತ್ ಪ್ರತಿಭಟನಾ ಸಮಾವೇಶ ನಡೆದಿತ್ತು. ಈ ಸಂದರ್ಭ ಕೆಲವೊಂದು ಪ್ರತಿಭಟನಾಕಾರರು ಖಾಸಗಿ ಬಸ್ ಮೇಲೇರಿ ಗೃಹಮಂತ್ರಿ ಅಮಿತ್ ಶಾ, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದ್ದರು. ಅಲ್ಲದೆ ಪೊಲೀಸರ ಕೈಕಾಲು ಕಡಿಯುತ್ತೇವೆ, ಅಗತ್ಯ ಬಿದ್ದಲ್ಲಿ ತಲೆಯನ್ನೂ ಕಡಿಯುತ್ತೇವೆ ಎಂದು ಘೋಷಣೆ ಕೂಗಿದ್ದರು. ಪ್ರತಿಭಟನಾಕಾರರು ಈ ರೀತಿ ಘೋಷಣೆ ಕೂಗಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ಚೇತನ್ ಎಂಬವರು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸದ್ಯ ಘೋಷಣೆ ಕೂಗಿದವರ ಮೇಲೆ ಎಫ್ಐಆರ್ ದಾಖಲಾಗಿದೆ.