ಕಡಬ (ದಕ್ಷಿಣ ಕನ್ನಡ): ಕೋವಿಡ್-19 ಕಾರಣದಿಂದಾಗಿ ಶಾಲಾ-ಕಾಲೇಜುಗಳು ಸ್ಥಗಿತಗೊಂಡಿವೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಆನ್‌ಲೈನ್ ತರಗತಿಗಳು ಆರಂಭಗೊಂಡಿದ್ದು, ಸರ್ಕಾರ ಆನ್‌ಲೈನ್ ತರಗತಿಗೆ ಉತ್ತೇಜನ ನೀಡಬೇಕೆಂದು ಸೂಚಿಸುತ್ತಿದೆ. ಆದರೆ ಇದೆಲ್ಲದರ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ ವಾಸ್ತವದಲ್ಲಿ ಪರಿಸ್ಥಿತಿ ಬೇರೆಯೇ ಇದೆ.
ಈ ಹಿನ್ನೆಲೆ ಆನ್‌ಲೈನ್ ಶಿಕ್ಷಣದ ಅನಾನುಕೂಲತೆಯ ಕುರಿತಂತೆ ಈಟಿವಿ ಭಾರತ ವರದಿ ಪ್ರಕಟಿಸಿತ್ತು. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ದೊಡ್ಡಕೊಪ್ಪ ನಿವಾಸಿ ವರುಣ್ ಹಾಗೂ ಲಾವಣ್ಯಾ ಎಂಬ ವಿದ್ಯಾರ್ಥಿಗಳ ಆನ್‌ಲೈನ್ ಕಲಿಕೆಗೆ ಮೂಲ ಸೌಕರ್ಯ ಅಡ್ಡಿಯಾಗಿದ್ದನ್ನು ವರದಿ ಮಾಡಿತ್ತು.
ಇದನ್ನೂ ಓದಿ: ಕಿತ್ತು ತಿನ್ನುವ ಬಡತನ, ಓದುವ ಹಂಬಲ: ಹಣವಿಲ್ಲದೇ ಗ್ರಾಮೀಣ ಮಕ್ಕಳ ಆನ್‌ಲೈನ್ ಶಿಕ್ಷಣ ಬಲಿ!
ಮನೆಯಲ್ಲಿ ಆನ್‌ಲೈನ್ ತರಗತಿಗೆ ಬೇಕಾದ ಟಿವಿಯಾಗಲೀ, ಸ್ಮಾರ್ಟ್ಫೋನ್ ವ್ಯವಸ್ಥೆಯಾಗಲಿ ಇರಲಿಲ್ಲ. ತಂದೆಗೆ ಸಹ ಈ ಸೌಲಭ್ಯ ಕಲ್ಪಿಸಲು ಅನಾರೋಗ್ಯ ಕಾಡುತ್ತಿತ್ತು. ಇಷ್ಟು ಮಾತ್ರವಲ್ಲದೇ ಇವರಿಗೆ ವಾಸಕ್ಕೆ ಒಂದು ಸರಿಯಾದ ಮನೆಯಾಗಲೀ, ಶೌಚಾಲಯವಾಗಲೀ ಇರಲಿಲ್ಲ. ಈ ಬಗ್ಗೆ ಈಟಿವಿ ಭಾರತ ಸವಿವರವಾದ ವರದಿ ಬಿತ್ತರಿಸಿತ್ತು.
ಈ ವರದಿ ಹಿನ್ನೆಲೆ ಈ ವಿದ್ಯಾರ್ಥಿಗಳ ನೆರವಿಗಾಗಿ ಹಲವು ಸಹೃದಯ ದಾನಿಗಳು ಮುಂದೆ ಬರುತ್ತಿದ್ದಾರೆ. ಇದೀಗ ನೆಲ್ಯಾಡಿಯ ಸಂತ ಅಲ್ಫೋನ್ಸಾ ಮತ್ತು ಆರ್ಲ ಸಂತ ಮೇರಿಸ್ ಚರ್ಚಿನ "ಕಿರಿಕುಸುಮ" ಮಿಷನ್ ಲೀಗ್ ಮಕ್ಕಳ ತಂಡವು ರೆವರೆಂಡ್ ಫಾದರ್ ಆದರ್ಶ್ ಜೋಸೆಫ್ ನೇತೃತ್ವದಲ್ಲಿ ವರುಣ್ ಕಲಿಕೆಗೆ ಬೇಕಾದ ಸ್ಮಾರ್ಟ್ ಟಿವಿ ನೀಡಿದ್ದಾರೆ.
ಮಾತ್ರವಲ್ಲದೆ ಕಡಬದ ಹಳೆ ವಿದ್ಯಾರ್ಥಿಗಳ ತಂಡವೊಂದು ಸ್ಮಾರ್ಟ್ಫೋನ್ವೊಂದನ್ನು ನೀಡಿದೆ. ಇಷ್ಟೂ ಮಾತ್ರವಲ್ಲದೆ ಹಲವಾರು ಜನ ಈ ಕುಟುಂಬದ ಬ್ಯಾಂಕ್ ಖಾತೆ ನಂಬರ್ ಪಡೆದು ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ.
ತಾಲೂಕು ಶಿಕ್ಷಣಾಧಿಕಾರಿಗಳು ಇವರ ಮನೆಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಇವರ ಸಂಕಷ್ಟಕ್ಕೆ ಪೂರ್ಣ ಪ್ರಮಾಣದ ನೆಮ್ಮದಿ ಸಿಗಬೇಕಾದರೆ ಇವರಿಗೊಂದು ಮನೆ ಹಾಗೂ ಅಗತ್ಯವಾಗಿ ಶೌಚಾಲಯ ವ್ಯವಸ್ಥೆ ಆಗಬೇಕಿದೆ. ಈ ನಿಟ್ಟಿನಲ್ಲಿ ಯಾರಾದರೂ ಸಹೃದಯರು, ಜನಪ್ರತಿನಿಧಿಗಳು ಮುಂದೆ ಬರಬೇಕಿದೆ.