ಪುತ್ತೂರು: ಹಲಸಿನ ಹಣ್ಣಿನಿಂದ ಇಂಧನ ತಯಾರಿಸಬಹುದು ಎಂಬುದನ್ನು ಕಂಡುಹಿಡಿದು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಯೋಜನೆಯೊಂದಿಗೆ ಗುರುತಿಸಿಕೊಂಡಿರುವ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಅವಳಿ ವಿದ್ಯಾರ್ಥಿಗಳು, ಶಾಲಾ ಆಡಳಿತ ಮಂಡಳಿಯು ಮಾಧ್ಯಮದವರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿತು.
ಶಾಲಾ ಆಡಳಿತ ಮಂಡಳಿ ಹಾಗೂ ಮಾಧ್ಯಮದವರೊಂದಿಗೆ ಇಂದು ನಡೆದ ಈ ಸಂವಾದ ಕಾರ್ಯಕ್ರಮವನ್ನು ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ನಮ್ಮ ಶಾಲೆಯಿಂದ 22 ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ, ಸುಮಾರು 48 ಮಂದಿ ರಾಷ್ಟ್ರ ಮಟ್ಟದಲ್ಲಿ ಸಂಶೋಧನೆ ನಡೆಸಿದ್ದಾರೆ. ಇದೀಗ ಹಲಸಿನ ಹಣ್ಣಿನಿಂದ ಇಂಧನ ತಯಾರಿಕೆ ಕುರಿತ ಪ್ರಾಜೆಕ್ಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಯಾಗಿದ್ದು, ಅಮೆರಿಕದ ಶೆಲ್ ಕಂಪನಿ ಯೋಜನೆಯನ್ನು ಪಡೆದುಕೊಂಡು ಮುಂದಿನ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದೆ. ಮುಖ್ಯವಾಗಿ ವಿಜ್ಞಾನಕ್ಕೆ ಒತ್ತು ನೀಡುತ್ತಾ ಬಂದಿರುವ ನಮ್ಮ ಶಾಲೆ, ಇದೀಗ ದೇಶದಲ್ಲಿ ಏಕೈಕ ಯೋಜನೆ ಎಂದು ಆಯ್ಕೆಯಾಗಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.
ಯತೀಶ್ಚಂದ್ರ ಹಾಗೂ ಹರಿಣಾಕ್ಷಿ ದಂಪತಿ ಅವಳಿ ಪುತ್ರರಾದ ಪ್ರಖ್ಯಾತ್ ಹಾಗೂ ಪ್ರಣವ್ ಈ ಸಂಶೋಧನೆ ಮಾಡಿದ್ದಾರೆ. ಒಟ್ಟು ಮೂರು ಹಂತದಲ್ಲಿ ತಮ್ಮ ಯೋಜನೆಯನ್ನು ಮಂಡಿಸಿ ಹಲಸಿನ ಹಣ್ಣಿನಿಂದ ಇಥೇನ್ ಇಂಧನ ತಯಾರಿಸಿ ಗುರುತಿಸಿಕೊಂಡಿದ್ದಾರೆ. ಮೊದಲನೇ ಹಂತದಲ್ಲಿ ಹಲಸಿನ ಹಣ್ಣಿನಿಂದ ಬೆಲ್ಲ ತಯಾರಿಸಿ, ಬಳಿಕ ಕ್ರಿಯಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಂಡು ಇಥೇನಾಲ್ ತಯಾರಿಸಿ ಯಶಸ್ವಿಯಾಗಿದ್ದಾರೆ. ಇದೀಗ ಅಮೆರಿಕದ ಶೆಲ್ ಕಂಪನಿ ಈ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದೆ. ಈ ಯೋಜನೆಗೆ ಶಾಲಾ ನಿವೃತ್ತ ಶಿಕ್ಷಕಿ ವಸಂತಿ ಕೆ., ವಿಜ್ಞಾನ ಶಿಕ್ಷಕಿ ಜಯಲಕ್ಷಿ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳಾದ ರೋಹನ್, ನಿಶಾಂತ್ ಕೂಡ ಸಹಕಾರ ನೀಡುತ್ತಾ ಬಂದಿದ್ದಾರೆ.
ಸುಮಾರು 2 ಕೆ.ಜಿ.ಯಷ್ಟು ಹಲಸಿನ ಹಣ್ಣಿನಿಂದ 250 ಎಂಎಲ್ ಇಥೇನ್ ಪಡೆಯಬಹುದಾಗಿದೆ. ಇದಕ್ಕೆ ಎಲ್ಲಾ ತಳಿಯ ಹಲಸಿನ ಹಣ್ಣು ಬಳಕೆ ಮಾಡಬಹುದು. ಕೊಳೆತ ಹಣ್ಣಿನಿಂದಲೂ ತಯಾರಿಸಬಹುದು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಹಲಸಿನ ಹಣ್ಣು ಯಥೇಚ್ಛವಾಗಿ ಸಿಗಲಿದ್ದು, ಇಥೇನ್ ಉತ್ಪಾದನೆಗೆ ಬಳಸಬಹುದಾಗಿದೆ. ಈ ಮೂಲಕ ಕೊಳೆತು ಮರದಡಿ ಬಿದ್ದು ಹೋದ ಹಣ್ಣಿನಿಂದ ಸೊಳ್ಳೆ ಉತ್ಪತ್ತಿಯಾಗುವುದನ್ನು ಕಡಿಮೆ ಮಾಡಬಹುದು. ಇದಕ್ಕೆ ಈ ಯೋಜನೆ ಪೂರಕವಾಗಿದೆ ಎಂದು ಹೇಳುತ್ತಾರೆ ವಿದ್ಯಾರ್ಥಿಗಳಾದ ಪ್ರಖ್ಯಾತ್ ಹಾಗೂ ಪ್ರಣವ್.
ಮುಂದಿನ ಹಂತದಲ್ಲಿ ಹಲಸಿನ ಹಣ್ಣಿನಿಂದ ಯಥೇಚ್ಛವಾಗಿ ಇಂಧನ ತಯಾರಿಸಿದ್ದಲ್ಲಿ ಹಲಸಿನ ಹಣ್ಣಿಗೆ ಬೇಡಿಕೆ ಹೆಚ್ಚಾಗಿ ರೈತರು ತಮ್ಮ ಜಮೀನಿನಲ್ಲಿ ಹಲಸಿನ ಹಣ್ಣನ್ನು ಬೆಳೆಯಲು ಸಹಕಾರಿಯಾಗಲಿದೆ. ಈ ಕುರಿತು ಸಂದೇಶವನ್ನು ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ನೀಡಿದರು. ಬಳಿಕ ಪತ್ರಕರ್ತರ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಿದರು.