ಮಂಗಳೂರು: ಭಾಷಣದ ಸಂದರ್ಭದಲ್ಲಿ ಆಝಾನ್ ಕೇಳಿ ಬಂದಿದ್ದಕ್ಕೆ ಆಝಾನ್ ವಿರುದ್ಧ ಮಂಗಳೂರಿನಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅಸಮಾಧಾನಗೊಂಡ ಘಟನೆ ನಡೆದಿದೆ. ಮಂಗಳೂರಿನ ಕಾವೂರು ಶಾಂತಿನಗರ ಮೈದಾನದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಬಹಿರಂಗ ಸಭೆಯಲ್ಲಿ ಈಶ್ವರಪ್ಪನವರು ಮಾತನಾಡಲು ಆರಂಭಿಸುತ್ತಿದ್ದಂತೆ ಆಝಾನ್ ಶುರುವಾಗಿದೆ. ಈ ವೇಳೆ, ಅಸಮಾಧಾನಗೊಂಡ ಅವರು, ನನಗೆ ಎಲ್ಲಿ ಹೋದ್ರೂ ಇದೊಂದು ತಲೆನೋವು ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಆದೇಶವಿದ್ದು, ಇಂದಲ್ಲ ನಾಳೆ ಇದು ಕೊನೆ ಆಗಲಿದೆ. ಇದರಲ್ಲೇನು ಅನುಮಾನ ಬೇಡ ಎಂದು ಹೇಳಿದರು. ಅವರ ಈ ಮಾತು ಕೇಳಿ ಕಾರ್ಯಕರ್ತರಿಂದ ಜೋರಾದ ಚಪ್ಪಾಳೆ, ಬೊಬ್ಬೆ ಕೇಳಿ ಬಂತು. ಎಲ್ಲಾ ಧರ್ಮಗಳಿಗೆ ಗೌರವ ಕೊಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳುತ್ತಾರೆ. ಮೈಕ್ನಲ್ಲಿ ಕೂಗಿದ್ದಲ್ಲಿ ಮಾತ್ರವೇ ದೇವರಿಗೆ ಕಿವಿ ಕೇಳೋದಾ? ನಮ್ಮ ದೇವಸ್ಥಾನಗಳಲ್ಲೂ ಪೂಜೆ ಮಾಡುತ್ತೇವೆ. ಶ್ಲೋಕ, ಭಜನೆಗಳನ್ನು ಹೇಳಲಾಗುತ್ತದೆ. ಅವರಿಗಿಂತ ಹೆಚ್ಚು ಭಕ್ತಿ ನಮ್ಮಲ್ಲೂ ಇದೆ. ಪ್ರಪಂಚದಲ್ಲಿ ಧರ್ಮವನ್ನು ಉಳಿಸುವಂತಹ ದೇಶ ಭಾರತ ಮಾತ್ರ. ಈ ಸಮಸ್ಯೆ ಆದಷ್ಟು ಬೇಗ ಪರಿಹಾರ ಆಗಬೇಕು ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಎಲ್ಲಾ ಮುಸಲ್ಮಾನರ ವೋಟು ಬೇಡ ಎಂದು ಹೇಳಿಲ್ಲ- ಈಶ್ವರಪ್ಪ ಸ್ಪಷ್ಟನೆ: ನಿನ್ನೆ ವಿಜಯಸಂಕಲ್ಪ ಯಾತ್ರೆಯಲ್ಲಿ ಮುಸಲ್ಮಾನರ ವೋಟು ಬೇಡ ಎಂದು ಹೇಳಿದ್ದು ಹೌದು. ಆದರೆ ಎಲ್ಲಾ ಮುಸಲ್ಮಾನರ ವೋಟು ಬೇಡ ಎಂದು ಹೇಳಿಲ್ಲ. ರಾಷ್ಟ್ರೀಯವಾದಿ ಮುಸಲ್ಮಾನರು ಬಿಜೆಪಿಗೆ ವೋಟು ಹಾಕ್ತಾರೆ. ಪಿಎಫ್ಐ, ಎಸ್ಡಿಪಿಐ ಬೆಂಬಲಿತ ಮುಸಲ್ಮಾನರ ಬಗ್ಗೆ ಹೇಳಿದ್ದೆ. ಆಜಾನ್ ಬಗ್ಗೆ ಹೇಳಿದ್ದೆ. ಪರೀಕ್ಷೆ ನಡೆಯುತ್ತಿದೆ, ಆಸ್ಪತ್ರೆಯಲ್ಲಿ ರೋಗಿಗಳು ಇರುತ್ತಾರೆ. ಶ್ರೀಸಾಮಾನ್ಯನ ಭಾವನೆಯನ್ನು, ನನ್ನ ವೈಯಕ್ತಿಕ ಅಭಿಪ್ರಾಯ ಹೇಳಿದ್ದೇನೆ. ಅಲ್ಲಾಗೆ ಕಿವಿ ಕೇಳಲ್ವ, ಕಿವುಡ ಎಂದು ಹೇಳಿದ್ದೇನೆ. ಮುಸಲ್ಮಾನ ನಾಯಕರು ಚಿಂತನೆ ಮಾಡಬೇಕು. ಇದು ಧಾರ್ಮಿಕ ನಿಂದನೆ ಅಲ್ಲ ಎಂದು ಮಾಜಿ ಸಚಿವರು ಸ್ಪಷ್ಟನೆ ಕೂಡಾ ನೀಡಿದರು.
ಇದನ್ನೂ ಓದಿ: ಹಿಂದೂಗಳ ಓಟು ನಮಗೆ ಬೇಡ ಎಂದು ಸಿದ್ದರಾಮಯ್ಯ ಘೋಷಣೆ ಮಾಡಲಿ: ಕೆ.ಎಸ್.ಈಶ್ವರಪ್ಪ
ಕೆಂಪಣ್ಣ ಕಾಂಗ್ರೆಸ್ ಏಜೆಂಟ್: ಇದೇ ವೇಳೆ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಕೆ ಎಸ್ ಈಶ್ವರಪ್ಪ, ಕಾಂಗ್ರೆಸ್, ಬಿಜೆಪಿ ಮೇಲೆ ಭ್ರಷ್ಟಾಚಾರ ಆರೋಪವನ್ನು ಮಾಡುತ್ತಿದೆ. ಕಾಂಗ್ರೆಸ್ ಮೇಲೆನೇ ಜನಸಾಮಾನ್ಯರು ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನೆಯಲ್ಲಿ ಕೋಟಿಗಟ್ಟಲೆ ಹಣ ಸಿಕ್ಕಿತ್ತು. ದೆಹಲಿ ಬಂಗ್ಲೆಯಲ್ಲಿ ಕೂಡ ನಗದನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಅವರು ತಿಹಾರ್ ಜೈಲ್ ಗೆ ಹೋಗಿ ಬಂದಿದ್ದಾರೆ. ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.
ಸಿದ್ದರಾಮಯ್ಯ ಅವರ ಮೇಲೆಯೂ ಭ್ರಷ್ಟಾಚಾರ ಆರೋಪಗಳು ಇವೆ. ನ್ಯಾ. ಕೆಂಪಯ್ಯ ಅವರ ವರದಿ ಬಹಿರಂಗ ಆಗಿದೆ. ಅರ್ಕಾವತಿ ಯೋಜನೆಯಲ್ಲಿ 800 ಎಕರೆಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿರುವುದು ಬಹಿರಂಗ ಆಗಿದೆ. ಇದರಲ್ಲಿ 8 ಸಾವಿರ ಕೋಟಿ ರೂ ಲೂಟಿ ಆಗಿದೆ. ಇದನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಪಕ್ಷವು ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ. ಕಾಂಟ್ರಾಕ್ಟ್ ದಾರರ ಅಸೋಸಿಯೇಷನ್ ನ ಕೆಂಪಣ್ಣ ಅವರು ಕೇಸ್ ಹಾಕದೆ ಪ್ರಧಾನಮಂತ್ರಿ ಗಳಿಗೆ ಪತ್ರ ಬರೆದಿದ್ದಾರೆ. ಕೆಂಪಣ್ಣ ಕಾಂಗ್ರೆಸ್ ಏಜೆಂಟ್. ಸೂಕ್ತ ದಾಖಲೆ ಕೊಡದೆ ಕೇಸ್ ಹಾಕದೆ ಆರೋಪ ಮಾಡಲಾಗಿದೆ ಎಂದು ಕೆ ಎಸ್ ಈಶ್ವರಪ್ಪ ಆರೋಪಿಸಿದರು.
ಇದನ್ನೂ ನೋಡಿ: ಕೊಪ್ಪಳದ ಗವಿಮಠಕ್ಕೆ ಅಸ್ಸಾಂ ಸಿಎಂ ಹಿಮಂತ್ ಬಿಸ್ವ ಶರ್ಮಾ ಭೇಟಿ