ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಸಾಮಾನ್ಯವಾಗಿ ಕಳೆಗಿಡಗಳು ಕಾಣಿಸುತ್ತವೆ. ಆದರೆ ಇಲ್ಲೊಬ್ಬರು ರಸ್ತೆ ಪಕ್ಕ ಇರುವ ಖಾಲಿ ಜಾಗದಲ್ಲಿ ತರಕಾರಿ ಬೆಳೆದಿದ್ದಾರೆ. ಬಿ ಸಿ ರೋಡ್ ಪುಂಜಾಲಕಟ್ಟೆ ಹೆದ್ದಾರಿಯಲ್ಲಿನ ಬಡಗುಂಡಿ ಎಂಬಲ್ಲಿ ಈ ಹಸಿರು ತರಕಾರಿಗಳು ಬೆಳೆಗಳು ಕಂಡುಬರುತ್ತವೆ.
ಹೆದ್ದಾರಿ ಪಕ್ಕ ತರಕಾರಿ: ಬಂಟ್ವಾಳ, ಮಣಿಹಳ್ಳ ದಾಟಿದ ನಂತರ ಬಡಗುಂಡಿ ಮತ್ತು ವಗ್ಗ ಮಧ್ಯ ಭಾಗದಲ್ಲಿ ಸಾಲು ಸಾಲು ತರಕಾರಿ ಗಿಡಗಳು ಎಲ್ಲರ ಗಮನ ಸೆಳೆಯುತ್ತಿವೆ. ಬಡಗುಂಡಿ ನಿವಾಸಿ ರಾಮಣ್ಣ ಸಪಲ್ಯ ಬೆಂಡೆ ಮತ್ತು ಅಲಸಂದೆ ಗಿಡಗಳನ್ನು ಬೆಳೆಸಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ತರಬೇತಿ ಪಡೆದು ಬೆಂಡೆ, ಅಲಸಂದೆ, ಹೀರೆಕಾಯಿ, ತೊಂಡೆ, ಸೋರೆ, ಬೂದು ಕುಂಬಳ ಹೀಗೆ ವಿವಿಧ ತರಕಾರಿ ಕೃಷಿ ಮಾಡಿದ್ದಾರೆ.
ಗದ್ದೆಯಲ್ಲಿ ತರಕಾರಿ ಬೆಳೆಯುತ್ತಿದ್ದ ರೈತ: ರಸ್ತೆ ಅಗಲೀಕರಣ ಮಾಡುವಾಗ ರಾಮಣ್ಣ ಸಪಲ್ಯ ತಮ್ಮ ಭೂಮಿಯನ್ನು ಕಳೆದುಕೊಂಡಿದ್ದರು. ಕಳೆದ 25 ವರ್ಷಗಳಿಂದ ತಮ್ಮ ಅಡಕೆ ತೋಟ ಮತ್ತು ಗದ್ದೆಯಲ್ಲಿ ತರಕಾರಿ ಬೆಳೆಯುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಇವರ ಜಮೀನಿನ ಒಂದು ಭಾಗ ಹೆದ್ದಾರಿ ವಿಸ್ತರಣೆಯಿಂದ ಕೈ ತಪ್ಪಿತ್ತು. ಹಾಗಾಗಿ ಈ ರಸ್ತೆ ಬದಿ ಉಳಿದಿರುವ ತಮ್ಮ ಅಡಕೆ ತೋಟಕ್ಕೆ ಇವರು ರಕ್ಷಣೆ ಬೇಲಿ ಅಳವಡಿಸಿದ್ದಾರೆ. ತರಕಾರಿ ಬೆಳೆಸುವ ಉತ್ಸಾಹ ನಿಲ್ಲಿಸದೆ ಹೆದ್ದಾರಿ ರಸ್ತೆಯ ಒಂದು ಬದಿಯಲ್ಲಿ ಸುಮಾರು ಎರಡು ಕಿಲೋ ಮೀಟರ್ ಉದ್ದದಲ್ಲಿ ತರಕಾರಿ ಬೆಳೆಸಿದ್ದಾರೆ.
250ಕ್ಕೂ ಹೆಚ್ಚು ಅಲಸಂದೆ ಗಿಡ: ಕೇವಲ ಹಟ್ಟಿಗೊಬ್ಬರ ಮತ್ತು ಹನಿ ನೀರಾವರಿ ಮೂಲಕ 150ಕ್ಕೂ ಹೆಚ್ಚು ಬೆಂಡೆ ಗಿಡ, 250ಕ್ಕೂ ಹೆಚ್ಚು ಅಲಸಂದೆ ಗಿಡ ಬೆಳೆದಿದ್ದಾರೆ. ರಸ್ತೆ ಬದಿಯ ಬೇಲಿಗೆ ಅಲಸಂದೆ ಬಳ್ಳಿ ಹಬ್ಬಿದೆ. ಉಳಿದಂತೆ ಮನೆ ಹಿಂಬದಿ ಬೇಲಿಯಲ್ಲಿ ಅಲಸಂದೆ ಮಾತ್ರವಲ್ಲದೆ ಹೀರೆಕಾಯಿ, ತೊಂಡೆ, ಸೋರೆಕಾಯಿ ಮತ್ತು ಬೂದುಕುಂಬಳ ಬಳ್ಳಿ ಬೆಳೆಸಿದ್ದಾರೆ. ರಸ್ತೆಯ ಬದಿಯಲ್ಲಿ ಇರುವ ತರಕಾರಿಗಳನ್ನು ನಿರಾಯಾಸವಾಗಿ ಮಂಗಗಳು, ನವಿಲುಗಳು ತಿಂದು ಹೋಗುತ್ತವೆ. ಆದರೆ ಇದರಿಂದ ರಸ್ತೆ ಬದಿಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಿಲ್ಲ.
ಶಾಲೆಗಳಿಗೆ ಉಚಿತವಾಗಿ ತರಕಾರಿ ನೀಡುವ ರೈತ: ತಾವು ಬೆಳೆಸಿದ ತರಕಾರಿಗಳನ್ನು ಸ್ವಂತಕ್ಕೂ ಮಾತ್ರವಲ್ಲದೆ ಹತ್ತಿರದ ಅಂಗನವಾಡಿ ಶಾಲೆ, ಪ್ರಾಥಮಿಕ ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಹಾಗೂ ಅಕ್ಷರ ದಾಸೋಹಕ್ಕೆ ಕೊಡುಗೆಯಾಗಿ ನೀಡುತ್ತಿದ್ದಾರೆ. ಕೃಷಿಯ ಬಗ್ಗೆ ಆಸಕ್ತಿ ಹೊಂದಿರುವ ಇವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬಂಟ್ವಾಳ ತೋಟಗಾರಿಕೆ ಇಲಾಖೆಯಿಂದ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ದೊರೆತಿದೆ. ಹೀಗಾಗಿ ಇವರು ತರಕಾರಿ ಬೆಳೆಯಲು ಆರಂಭಿಸಿದರು.
ಇದನ್ನೂ ಓದಿ: ಇವರ ಮನೆಯೇ ಹಸಿರು ತುಂಬಿದ ಕೈತೋಟ.. ವೈದ್ಯೆಯ ನಿವಾಸದ ತುಂಬ ಹೂ, ತರಕಾರಿ, ಜೇನು
ಈ ಹಿಂದೆ ತೈವಾನ್ ಪಪ್ಪಾಯಿ ಬೆಳೆದು ಆರ್ಥಿಕವಾಗಿ ಸ್ವಾವಲಂಬನೆ ಕಂಡುಕೊಂಡಿದ್ದೇನೆ. ಕೆಲವೊಮ್ಮೆ ತರಕಾರಿ ಬಳ್ಳಿಗೆ ನವಿಲುಗಳ ಕಾಟ ಕಂಡು ಬರುತ್ತದೆ ಅನ್ನೋದು ಬಿಟ್ಟರೆ ಉಳಿದಂತೆ ಬೇರೆ ಯಾವುದೇ ಪ್ರಾಣಿಗಳ ಉಪಟಳವಿಲ್ಲ. ಸಾವಯವ ಗೊಬ್ಬರ ಬಳಕೆಯಿಂದ ಗಿಡಗಳಿಗೆ ಯಾವುದೇ ರೋಗ ಭೀತಿ ಇಲ್ಲ ಎಂದು ರಾಮಣ್ಣ ಹೇಳುತ್ತಾರೆ.