ಭಟ್ಕಳ(ಉತ್ತರ ಕನ್ನಡ): ಜಿಲ್ಲಾಡಳಿತದ ಆದೇಶದಂತೆ ಭಟ್ಕಳದಲ್ಲಿ ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಲಾಗಿದೆ. ಜನರು ಅಗತ್ಯ ವಸ್ತುಗಳನ್ನು ಪಡೆದುಕೊಳ್ಳುವ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಆಯಾ ವಿಭಾಗಗಳಲ್ಲಿ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಸಹಾಯಕ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಹಾಯಕ ಆಯುಕ್ತ ಭರತ್.ಎಸ್, ಮನೆಯಿಂದ ಯಾರೂ ಹೊರ ಬರುವ ಹಾಗಿಲ್ಲ. ಒಂದ್ವೇಳೆ ನಿಯಮ ಮೀರಿ ಬಂದಲ್ಲಿ ಅವರ ಮೇಲೆ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಪರವಾನಗೆ ಇಲ್ಲದೆ ವಾಹನದಲ್ಲಿ ಓಡಾಡಿದರೆ ವಾಹನ ಪರವಾನಗಿ ರದ್ದು ಮಾಡಲಾಗುವುದು. ಇದ್ರ ಜೊತೆಗೆ 2ನೇ ಬಾರಿ ತಪ್ಪು ಮಾಡಿದ್ದಲ್ಲಿ ವಾಹನ ವಶಕ್ಕೆ ಪಡೆದು ಜಪ್ತಿ ಮಾಡಲಿದ್ದೇವೆ ಎಂದು ಎಚ್ಚರಿಸಿದ್ದಾರೆ.
ಜನರಿಗೆ ಸ್ಯಾನಿಟೈಸರ್, ಮಾಸ್ಕ್‌ಗಳೂ ಸೇರಿದಂತೆ ಎಲ್ಲಾ ರೀತಿಯ ಮೆಡಿಕಲ್ ವಸ್ತುಗಳನ್ನು ಪೂರೈಸಲಿದ್ದೇವೆ. ಖಾಸಗಿ ಆಸ್ಪತ್ರೆಯ ವೈದ್ಯರ ಅವಶ್ಯಕತೆ ಬಿದ್ದಲ್ಲಿ ತಾಲೂಕಾಡಳಿತ ಸಹಕರಿಸಲಿದೆ. ವಾಹನ ವ್ಯವಸ್ಥೆಯನ್ನೂ ಮಾಡಲಿದ್ದೇವೆ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಯಾವುದೇ ರೀತಿಯ ಅಗತ್ಯ ವಸ್ತುಗಳ ಪೂರೈಕೆ ಬೇಕಿದ್ದಲ್ಲಿ ಅವರು ತುರ್ತು ಹೆಲ್ಪ್‌ಲೈನ್‍ಗೆ ಕರೆ ಮಾಡಿ ಅವಶ್ಯಕ ವಸ್ತುವನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಈ ವಿಪತ್ತಿಗೆ ಎಲ್ಲರ ಸಹಕಾರ ಅಗತ್ಯವಿದೆ. ಬದುಕಲು ಬೇಕಾಗಿರುವ ವಸ್ತುಗಳನ್ನು ಪಡೆದು ಮನೆಯಲ್ಲಿಯೇ ಇರಿ. ನಾಲಿಗೆ ರುಚಿಗಾಗಿ ಯಾವುದನ್ನೂ ಮಾಡಬೇಡಿ. ಮುಖ್ಯವಾಗಿ ಹೋಮ್ ಡಿಲಿವರಿಯಲ್ಲಿ ವಿತರಕರ ಜೊತೆಗೆ ತಕರಾರು ಮಾಡದೆ ಜನರು ಸಹಕರಿಸಬೇಕು ಎಂದು ಕಿವಿಮಾತು ಹೇಳಿದರು.