ದಕ್ಷಿಣಕನ್ನಡ: ಕಾಡಾನೆಗಳ ಹಾವಳಿಗೆ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ರೈತರು ಕಂಗಾಲಾಗಿದ್ದಾರೆ. ಕಳೆದ ಒಂದು ವಾರದಿಂದ ಇಲ್ಲೇ ಬೀಡು ಬಿಟ್ಟಿರುವ ಆನೆಗಳು ಅನ್ನದಾತರಿಗೆ ಕಣ್ಣೀರು ತರಿಸಿವೆ.
ಈ ಹಿಂದೆ ರಾತ್ರಿ ವೇಳೆಯಲ್ಲಿ ಕಾಡಿನಿಂದ ನಾಡಿಗೆ ಬರುತ್ತಿದ್ದ ಕಾಡಾನೆಗಳು ಇದೀಗ ದಿನದ 24 ಗಂಟೆಯೂ ಕಾಣಸಿಕೊಳ್ಳುತ್ತಿವೆ. ಇದರಿಂದ ಬಳಕ್ಕ, ಬೊಳ್ಳಾಜೆ ಪ್ರದೇಶದ ಸುಮಾರು 25ಕ್ಕೂ ಹೆಚ್ಚು ಕುಟುಂಬಗಳು ಮನೆಯಿಂದ ಹೊರಬರಲು ಸಾಧ್ಯವಾಗದೇ ಆತಂಕದಲ್ಲಿವೆ. ಕೆಲ ದಿನಗಳ ಹಿಂದೆ ಕಾಡಾನೆಯೊಂದು ಪ್ರೇಮ ಎಂಬ ಮಹಿಳೆ ಹಾಗೂ ಆಕೆಯ ಮಗಳನ್ನು ಅಟ್ಟಿಸಿಕೊಂಡು ಬಂದಿತ್ತು.
ಕಾಡಂಚಿನಲ್ಲಿರುವ ರಸ್ತೆಯಲ್ಲೇ ಈ ಭಾಗದ ಜನರು ಸಂಚರಿಸಬೇಕಾಗಿದ್ದು, ಎಲ್ಲಿ ಆನೆ ಬರುತ್ತೋ ಎಂಬ ಭಯ ಎದುರಾಗಿದೆ. ಗ್ರಾಮದ ಸುತ್ತಮುತ್ತ ಠಿಕಾಣಿ ಹೂಡಿರುವ ಆನೆಗಳ ಹಿಂಡು, ರೈತರ ಬೆಳೆಗಳನ್ನು ನಾಶಗೊಳಿಸುತ್ತಿವೆ. ಒಂದು ವಾರದಿಂದ ಆನೆಯ ಹಿಂಡು ಹಗಲಲ್ಲೇ ಕೆಲ ಮನೆಗಳ ಸಮೀಪವೂ ಕಂಡುಬರುತ್ತಿದೆ.
ಈ ಆನೆಗಳ ಉಪಟಳ ಹೆಚ್ಚಾಗುತ್ತಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿ ನಿವಾಸಿಗಳು ಆಗ್ರಹಿಸಿದ್ದಾರೆ.