ಮಂಗಳೂರು: ನಿರುದ್ಯೋಗದ ವಿರುದ್ಧ ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ವಿದ್ಯಾರ್ಥಿ ಹೋರಾಟ ನಡೆಸುತ್ತಿದ್ದಾಗ ಲಾಠಿ ಪ್ರಹಾರ ನಡೆಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದ ಕ್ರಮವನ್ನು ಖಂಡಿಸಿ ಡಿವೈಎಫ್ಐ ದ.ಕ.ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಧರಣಿ ನಡೆಸಲಾಯಿತು.
ಈ ಸಂದರ್ಭ ಧರಣಿ ನಿರತರು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಧರಣಿ ನಿರತರನ್ನು ಉದ್ದೇಶಿಸಿ ಡಿವೈಎಫ್ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮಾತನಾಡಿ, ಈ ದೇಶದ ಚುಕ್ಕಾಣಿ ಹಿಡಿದಿರುವ ಸರ್ಕಾರದ ತಪ್ಪು ಆರ್ಥಿಕ ನೀತಿಯಿಂದಾಗಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಆರ್ಥಿಕ ಸಂಕಷ್ಟಗಳಿಗೆ ಮೊದಲಾಗಿ ಗುರಿಯಾದವರು ಯುವ ಜನತೆ. ಈ ನಿರುದ್ಯೋಗದ ವಿರುದ್ಧ ಚಳವಳಿ ನಡೆಸಲು ಯುವಜನತೆ ಬೀದಿಗಿಳಿದಿದ್ದಾರೆ ಎಂದರು.
ಇಡೀ ಭಾರತಾದ್ಯಂತ ಡಿವೈಎಫ್ಐ ಹಾಗೂ ಇತರ ಸಂಘಟನೆಗಳು ಹೋರಾಟಕ್ಕೆ ಕರೆ ನೀಡಿವೆ. ಆದರೆ ಪಶ್ಚಿಮ ಬಂಗಾಳದಲ್ಲಿ ನಿನ್ನೆ ನಡೆದ ಹೋರಾಟವನ್ನು ಸಹಿಸದ ಮಮತಾ ಬ್ಯಾನರ್ಜಿ ಸರ್ಕಾರ ಸಿಂಗೂರಿನಲ್ಲಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿ, ಹೋರಾಟಗಾರರ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.