ಬಂಟ್ವಾಳ: ಕೇಂದ್ರ ಸರ್ಕಾರ ಜನರಿಗೆ ಕಡಿಮೆ ಬೆಲೆಗೆ ಔಷಧಗಳನ್ನು ದೊರಕಿಸುವ ನಿಟ್ಟಿನಲ್ಲಿ ದೇಶಾದ್ಯಂತ ಎಲ್ಲ ಪಟ್ಟಣಗಳಲ್ಲಿ ಆರಂಭಿಸಿರುವ ಜನೌಷಧ ಕೇಂದ್ರವನ್ನು ವಿಟ್ಲದಲ್ಲೂ ಆರಂಭಿಸುವಂತೆ ಡಿವೈಎಫ್ಐ ಒತ್ತಾಯಿಸಿದೆ.
ಡಿವೈಎಫ್ಐ ವಿಟ್ಲ ವಲಯ ಸಮಿತಿ ವತಿಯಿಂದ ವಿಟ್ಲ ನಾಡಕಚೇರಿ ಉಪ ತಹಶೀಲ್ದಾರರ ಮುಖಾಂತರ ಪ್ರಧಾನ ಮಂತ್ರಿಯವರಿಗೆ ಈ ಕುರಿತು ಮನವಿ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರ ಜನರಿಗೆ ಕಡಿಮೆ ಬೆಲೆಗೆ ಔಷಧಗಳನ್ನು ದೊರಕಿಸುವ ನಿಟ್ಟಿನಲ್ಲಿ ದೇಶಾದ್ಯಂತ ಎಲ್ಲ ಪಟ್ಟಣಗಳಲ್ಲಿ ಜನೌಷಧ ಕೆಂದ್ರಗಳನ್ನು ಮಂಜೂರು ಮಾಡಿರುತ್ತದೆ. ಆದರೆ, ವಿಟ್ಲದ ಜನತೆಗೆ ಇದರ ಪ್ರಯೋಜನ ಪಡೆಯಲು ಕಷ್ಟಸಾದ್ಯವಾಗಿದೆ. ವಿಟ್ಲದಲ್ಲಿ ಈಗಾಗಲೇ ಒಂದು ಜನೌಷಧ ಕೇಂದ್ರ ಇದ್ದರೂ ಅದು ಖಾಸಗಿ ಮೆಡಿಕಲ್ ಜೊತೆಯಲ್ಲೇ ಇದ್ದು ಇಲ್ಲಿ ಜನರಿಗೆ ಬೇಕಾದ ಔಷಧಗಳು ಕೆಲ ಸಂದರ್ಭ ಲಭ್ಯವಿರುವುದಿಲ್ಲ.
ಇಂದು ಜನರಿಗೆ ದುಬಾರಿ ಬೆಲೆ ನೀಡಿ ಔಷಧಗಳನ್ನು ಖರೀದಿಸಲು ಕಷ್ಟಸಾಧ್ಯವಾಗಿದೆ. ಸರಕಾರವು ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಜನೌಷಧ ಯೋಜನೆಯನ್ನು ಜಾರಿಗೊಳಿಸಿದ್ದು, ಆದರೆ, ವಿಟ್ಲದ ಜನತೆಗೆ ಇದರ ಪ್ರಯೋಜನ ಮರೀಚಿಕೆಯಾಗಿದೆ. ವಿಟ್ಲದ ಜನತೆಗೂ ಕಡಿಮೆ ಬೆಲೆಗೆ ಔಷಧ ದೊರಕುವಂತಾಗಲು ವಿಟ್ಲ ಪಟ್ಟಣಕ್ಕೆ ಒಂದು ಪ್ರತ್ಯೇಕ ಜನೌಷಧ ಕೇಂದ್ರವನ್ನು ಮಂಜೂರು ಮಾಡಬೇಕು ಎಂದು ಈ ಹಿನ್ನೆಲೆಯಲ್ಲಿ ಒತ್ತಾಯಿಸಿದ್ದಾರೆ.
ನಿಯೋಗದಲ್ಲಿ ತಾಲೂಕು ಕಾರ್ಯದರ್ಶಿ ತುಳಸೀದಾಸ್ ವಿಟ್ಲ, ವಿಟ್ಲ ವಲಯ ಸಮಿತಿ ಅಧ್ಯಕ್ಷರಾದ ನಿಜುಂ ಅಳಿಕೆ, ಮುಖಂಡರಾದ ತಮೀಮ್ ಎಂ.ಕೆ, ಜಲೀಲ್ ಅಳಿಕೆ ಮುಂತಾದವರು ಇದ್ದರು.