ಬೆಳ್ತಂಗಡಿ(ದಕ್ಷಿಣ ಕನ್ನಡ): ಕೇಂದ್ರ ಸರ್ಕಾರದ ಆಯುಷ್ ಇಲಾಖಾ ಸಚಿವ ಶ್ರೀಪಾದ ಯೆಸ್ಸೊ ನಾಯಕ್ ಸಕುಟುಂಬಿಕರಾಗಿ ಪ್ರಯಾಣಿಸುತ್ತಿದ್ದ ಕಾರು ಅಂಕೋಲಾದಲ್ಲಿ ಅಪಘಾತಕ್ಕೀಡಾಗಿದ್ದು, ಪತ್ನಿ ವಿಜಯ ನಾಯಕ್ ಮತ್ತು ಸಚಿವರ ಆಪ್ತ ಕಾರ್ಯದರ್ಶಿ ದೀಪಕ್ ದುಮೆ ನಿಧನದ ಸುದ್ದಿ ತಿಳಿದು ಆಘಾತವಾಯಿತು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಸಾತ್ವಿಕರು ಹಾಗೂ ಸರಳ ವ್ಯಕ್ತಿತ್ವವನ್ನು ಹೊಂದಿದ್ದ ಸಚಿವ ಶ್ರೀಪಾದ ಯೆಸ್ಸೊ ನಾಯಕ್ ಸ್ನೇಹ ಜೀವಿಯಾಗಿದ್ದವರು. ಕೊಂಚವೂ ಅಹಂಕಾರ, ಆಡಂಬರವಿಲ್ಲದೆ ಹಸನ್ಮುಖಿಯಾಗಿ ಸದಾ ಸೇವಾಕಾರ್ಯಗಳಲ್ಲಿ ನಿರತರಾಗಿದ್ದವರು. ಆಯುಷ್ ಇಲಾಖೆ ಮೂಲಕ ಅವರು ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಕಾಲೇಜಿಗೆ ವಿಶೇಷ ನೆರವು, ಪ್ರೋತ್ಸಾಹ ನೀಡುತ್ತಿದ್ದಾರೆ. ಅವರು ಶೀಘ್ರ ಗುಣಮುಖರಾಗಿ ಪೂರ್ಣ ಆರೋಗ್ಯವನ್ನು ಹೊಂದಿ, ದೇಶ ಸೇವೆ ಮಾಡುವಂತೆ ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದರು.
ಅಪಘಾತದಲ್ಲಿ ನಿಧನರಾದ ಸಚಿವರ ಪತ್ನಿ ಮತ್ತು ಆಪ್ತ ಕಾರ್ಯದರ್ಶಿ ದೀಪಕ್ ದುಮೆ ಅವರ ಆತ್ಮಕ್ಕೆ ಹೆಗ್ಗಡೆಯವರು ಚಿರಶಾಂತಿ ಕೋರಿದ್ದಾರೆ.