ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ನೀಡುವ 2020ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಅರ್ಥಧಾರಿ ಹಾಗೂ ಪ್ರಸಂಗಕರ್ತ ಡಿ.ಎಸ್.ಶ್ರೀಧರ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು, ಪ್ರಶಸ್ತಿ ಫಲಕಗಳನ್ನು ಹೊಂದಿದೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆಯವರು ಪ್ರಶಸ್ತಿ ಘೋಷಣೆ ಮಾಡಿ ಹೇಳಿದರು. ಈ ಬಾರಿಯ ಕರ್ನಾಟಕ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿಗೆ ಐವರು ಆಯ್ಕೆಯಾಗಿದ್ದಾರೆ. ಅದರಲ್ಲಿ ಇತ್ತೀಚೆಗೆ ಮೃತಪಟ್ಟ ತೆಂಕುತಿಟ್ಟು ಯಕ್ಷಗಾನ ಕಲಾವಿದ ದಿ.ಕೆ.ತಿಮ್ಮಪ್ಪ ಗುಜರನ್ ಅವರಿಗೆ ಈ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗುತ್ತಿದೆ ಎಂದರು.
ಉಳಿದಂತೆ ಬಡಗುತಿಟ್ಟು ಯಕ್ಷಗಾನ ಕಲಾವಿದ, ಯಕ್ಷ ಗುರು ಬಿ.ಬನ್ನಂಜೆ ಸಂಜೀವ ಸುವರ್ಣ, ಪಡುವಲಪಾಯ ಹಿರಿಯ ಯಕ್ಷಗಾನ ವಿದ್ವಾಂಸೆ ಡಾ.ವಿಜಯ ನಳಿನಿ ರಮೇಶ್, ಮೂಡಲಪಾಯ ಯಕ್ಷಗಾನ ವಿದ್ವಾಂಸ ಹಾಗೂ ಸಂಘಟಕ ಡಾ.ಚಕ್ಕೆರೆ ಶಿವಶಂಕರ್, ಮೂಡಲಪಾಯ ಯಕ್ಷಗಾನ ಕಲಾವಿದ ಹಾಗೂ ಸಂಘಟಕ ಬಿ.ಪರಶುರಾಮ್ ಅವರು ಆಯ್ಕೆಯಾಗಿದ್ದಾರೆ. ಗೌರವ ಪುರಸ್ಕೃತರಿಗೆ ತಲಾ 50 ಸಾವಿರ ರೂ. ನಗದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದು ಪ್ರೊ.ಎಂ.ಎ.ಹೆಗಡೆ ಹೇಳಿದರು.
ಓದಿ: ನೇತ್ರಾಣಿ ಸಮೀಪ ಮೀನುಗಾರಿಕೆಗೆ ತೆರಳಿದ ಬೋಟ್ ಮುಳುಗಡೆ: ಮೂವರು ಮೀನುಗಾರರ ರಕ್ಷಣೆ
ಈ ಬಾರಿಯ ಕರ್ನಾಟಕ ಯಕ್ಷಗಾನ ಅಕಾಡೆಮಿ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಹತ್ತು ಮಂದಿ ಆಯ್ಕೆಯಾಗಿದ್ದಾರೆ. ಬಡಗುತಿಟ್ಟು ಯಕ್ಷಗಾನ ಕಲಾವಿದರಾದ ಗೋಪಾಲ ಆಚಾರ್ಯ ತೀರ್ಥಹಳ್ಳಿ, ಬೆಲ್ತೂರು ರಮೇಶ್, ತೆಂಕುತಿಟ್ಟು ಯಕ್ಷಗಾನ ಕಲಾವಿದ ಆವರ್ಸೆ ಶ್ರೀನಿವಾಸ ಮಡಿವಾಳ, ತೆಂಕುತಿಟ್ಟು ಹಿಮ್ಮೇಳ ವಾದಕ ಹರಿನಾರಾಯಣ ಬೈಪಡಿತ್ತಾಯ, ತೆಂಕುತಿಟ್ಟಿನ ಖ್ಯಾತ ಸ್ತ್ರೀವೇಷಧಾರಿ ಸಂಜಯ ಕುಮಾರ್ ಶೆಟ್ಟಿ, ಪಡುವಲಪಾಯ ಯಕ್ಷಗಾನ ಸಂಘಟಕ ಎಂ.ಆರ್.ಹೆಗಡೆ ಕಾನಗೋಡ, ಬಡಗುತಿಟ್ಟು ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ, ಮೂಡಲಪಾಯ ಯಕ್ಷಗಾನ ಭಾಗವತ ಹನುಮಂತ ರಾಯಪ್ಪ, ಮುಖವೀಣೆ ಕಲಾವಿದ ಎ.ಎಂ.ಮುಳವಾಗಲಪ್ಪ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಹೇಳಿದರು.