ಸುಳ್ಯ(ದಕ್ಷಿಣ ಕನ್ನಡ): ಕರಾವಳಿಯಲ್ಲಿ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ. ಸದ್ಯ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗಗಳು ಕಾಣಿಸಿಸುತ್ತಿದ್ದು ಕೃಷಿಕರು ನಲುಗಿದ್ದಾರೆ. ಇತ್ತ ಅಡಿಕೆ ತೋಟಕ್ಕೆ ಔಷಧಿ ಸಿಂಪಡಣೆ ಅನಿವಾರ್ಯವಾಗಿದೆ. ಇದೀಗ ಇಲ್ಲಿ ಡ್ರೋನ್ ಮೂಲಕ ಔಷಧಿ ಸಿಂಪಡಣೆ ಕಾರ್ಯ ನಡೆಯುತ್ತಿದ್ದು, ಈ ಪ್ರಕ್ರಿಯೆ ಪ್ರಾಯೋಗಿಕವಾಗಿ ಜಿಲ್ಲೆಯಲ್ಲಿ ಪ್ರಥಮವಾಗಿ ಸುಳ್ಯದಲ್ಲಿ ಆರಂಭವಾಗಿವೆ.
ಸುಳ್ಯ ತಾಲೂಕು ಅಡಿಕೆ ಹಳದಿ ಎಲೆ, ಎಲೆಚುಕ್ಕಿ ರೋಗದಿಂದ ಭಾರಿ ಪ್ರಮಾಣದಲ್ಲಿ ಹಾನಿಗೊಳಗಾಗಿರುವ ತಾಲೂಕು. ಈ ರೋಗದಿಂದ ಇಡೀ ಅಡಿಕೆ ತೋಟವೇ ಹಾನಿಗೊಳಗಾಗಿ ರೈತರು ಸಂಕಷ್ಟ ಅನುಭವಿಸಿದ್ದಾರೆ. ಇವುಗಳಿಗೆ ಔಷಧಿ ಕಂಡುಹಿಡಿಯುವ ಪ್ರಕ್ರಿಯೆಗಳು ವಿಜ್ಞಾನಿಗಳ ಹಂತದಲ್ಲಿ ನಿರಂತರವಾಗಿ ನಡೆಯುತ್ತಿದ್ದರೂ, ಕೃಷಿಕರು ತಮ್ಮ ಅನುಭವದ ಮೂಲಕ ವಿವಿಧ ರೀತಿಯ ಔಷಧಗಳ ಮೂಲಕ ಪ್ರಯೋಗಾತ್ಮಕವಾಗಿ ಔಷಧಿ ಸಿಂಪಡಿಸಿ ರೋಗ ನಿಯಂತ್ರಣಕ್ಕೆ ಶ್ರಮ ವಹಿಸುತ್ತಿದ್ದಾರೆ.
ಡ್ರೋನ್ ಬಳಕೆ.. ಅಡಿಕೆ ಎಲೆಚುಕ್ಕಿ ರೋಗ ವ್ಯಾಪಕವಾಗಿದ್ದು, ಕೃಷಿಕರು ಆತಂಕಕ್ಕೆ ಒಳಗಾಗಿದ್ದಾರೆ. ಅಡಿಕೆಗೆ ಔಷಧಿ ಸಿಂಪಡಣೆಗೆ ಕಾರ್ಮಿಕರ ಕೊರತೆಯೂ ಎದುರಾಗಿದೆ. ಇದೀಗ ಅಡಿಕೆ ಎಲೆಚುಕ್ಕಿ ಪೀಡಿತ ತೋಟಕ್ಕೆ ಔಷಧಿ ಸಿಂಪಡಣೆಗೆ ಡ್ರೋನ್ ಬಳಕೆ ಮಾಡಲಾಗುತ್ತಿದೆ. ಸುಳ್ಯ ತಾಲೂಕಿನ ಕಳಂಜ ಗ್ರಾಮದ ಗಿರಿಕೃಪಾ ಫಾರ್ಮ್ನ ಸುದರ್ಶನ ಕೋಟೆ ಅವರು ಡ್ರೋನ್ ಮೂಲಕ ಪ್ರಾಯೋಗಿಕ ಔಷಧಿ ಸಿಂಪಡಣೆಗೆ ಮುಂದಾಗಿರುವ ಕೃಷಿಕ.
15 ನಿಮಿಷದಲ್ಲಿ ಸಿಂಪಡಣೆ ಕಾರ್ಯ.. ಔಷಧಿ ಸಿಂಪಡಣೆಗೆ ಬಳಕೆ ಮಾಡಿಕೊಂಡ ಡ್ರೋನ್ 'ಮಲ್ಟಿಪ್ಲೆಕ್ಸ್ ಎಂ' ಎಂಬ ಸಂಸ್ಥೆಯವರದ್ದಾಗಿದೆ. ಡ್ರೋನ್‌ನಲ್ಲಿ ಸುಮಾರು 10 ಲೀಟರ್ ಸಾಮರ್ಥ್ಯದ ಟ್ಯಾಂಕ್ ಹೊಂದಿದೆ. 10 ಲೀಟರ್ ಔಷಧಿ ತುಂಬಿಸಿದ ಬಳಿಕ ಡ್ರೋನ್ 25 ಕೆ.ಜಿ. ತೂಕವಿರಲಿದೆ. 10 ಲೀಟರ್ ಔಷಧಿಯಲ್ಲಿ ಅರ್ಧ ಎಕರೆ ತೋಟಕ್ಕೆ ಸಿಂಪಡಿಸಬಹುದಾಗಿದೆ. 15 ನಿಮಿಷದಲ್ಲಿ ಸಿಂಪಡಣೆ ಕಾರ್ಯ ನಡೆಸಬಹುದು. ಡ್ರೋನ್ ಮೂಲಕ ಔಷಧ ಸಿಸ್ಟಮ್ಯಾಟಿಕ್ ಫಂಗಿಸೈಡ್ ಮಾದರಿಯಲ್ಲಿ ನಡೆಯಲಿದ್ದು, ಡ್ರೋನ್ ಅಡಿಕೆ ಮರಗಳ ಮೇಲ್ಭಾಗದಿಂದ ಅಡಿಕೆ ಮರದ ಎಲೆಗಳ ಮೇಲೆ ಔಷಧಿ ಸಿಂಡನೆಯಾಗುತ್ತದೆ. ಸಂಸ್ಥೆಯವರೇ ಡ್ರೋನ್‌ಅನ್ನು ನಿರ್ವಹಿಸುತ್ತಾರೆ. ಅಡಿಕೆ ಎಲೆಚುಕ್ಕಿ ರೋಗ ಬಾಧಿತ ತೋಟಕ್ಕೆ ಈ ರೀತಿಯಲ್ಲಿ ಡ್ರೋನ್ ಮೂಲಕ ಔಷಧಿ ಸಿಂಪಡಣೆ ಮಾಡಲಾಗುತ್ತದೆ ಎಂದು ಕೃಷಿಕ ಸುದರ್ಶನ ಕೋಟೆ ಮಾಹಿತಿ ನೀಡಿದರು.
ಎಲೆಗೆ ಔಷಧಿ ಸಿಂಪಡಿಸಲು ಸಹಕಾರಿ: ಸಿಂಪಡಣೆಗೆ ಬಳಸುವ ಔಷಧಿ ಕೃಷಿಕರು ತಿಳಿಸಬೇಕಿದ್ದು, ಅಥವಾ ಸಂಸ್ಥೆಯವರ ಅವಲಂಭಿತ ಔಷಧಿ ಬಳಕೆ ಮಾಡಬೇಕಾಗುತ್ತದೆ. ಶೃಂಗೇರಿ ಮೊದಲಾದ ಕಡೆಗಳಲ್ಲಿ ಈ ಮೊದಲು ಡ್ರೋನ್ ಮೂಲಕ ಔಷಧಿ ಸಿಂಪಡಣೆ ಮಾಡಲಾಗಿತ್ತು. ಕೃಷಿಯಲ್ಲಿ ವಿವಿಧ ರೀತಿಯ ಆಧುನೀಕರಣದ ಬದಲಾವಣೆಗಳಾಗಿದ್ದು, ಪ್ರಸ್ತುತ ಇರುವ ಡ್ರೋನ್ ಅಡಿಕೆ ಎಲೆಗೆ ಔಷಧಿ ಸಿಂಪಡಿಸಲು ಸಹಕಾರಿ. ಆದರೆ ಅಡಿಕೆ ಸಿಂಗಾರ, ಗೊಂಚಲಿಗೆ ಡ್ರೋನ್ ಮೂಲಕ ಔಷಧಿ ಸಿಂಪಡಿಸುವ ತಂತ್ರಾಜ್ಞಾನ ಇಲ್ಲ ಎನ್ನಲಾಗಿದ್ದು, ಇದರಲ್ಲಿ ಸುಧಾರಣೆ ಕಂಡಲ್ಲಿ ಕೃಷಿಕರಿಗೆ ಇನ್ನೂ ಸಹಕಾರಿಯಾಗಲಿದೆ.
ಡ್ರೋನ್ ಮೂಲಕ ಸಿಂಪಡಿಸುತ್ತಿರುವ ಔಷಧಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಈಗಾಗಲೇ ಹೇಳಲು ಸಾಧ್ಯವಿಲ್ಲ. ಆದರೂ ಇದು ಕೃಷಿಕರಿಗೆ ಪ್ರಯೋಜನಕಾರಿ ಎನ್ನುತ್ತಾರೆ ಕೃಷಿಕರು. ಡ್ರೋನ್ ಮೂಲಕ ಔಷಧಿ ಸಿಂಪಡಣೆ ಕಡಿಮೆ ಖರ್ಚು, ಕಡಿಮೆ ಸಮಯದಲ್ಲಿ ಆಗುತ್ತಿದೆ. ಇದರಿಂದಾಗಿ ಇದಕ್ಕೆ ಬೇಡಿಕೆ ವ್ಯಕ್ತವಾಗಿದ್ದು, ಸಂಸ್ಥೆಯವರು ಜಿಲ್ಲೆಗೆ ಮೂರು ಡ್ರೋನ್ ನೀಡಲಿದ್ದಾರೆ ಎನ್ನಲಾಗಿದೆ. ಸುಳ್ಯ ತಾಲೂಕಿನ ಕಳಂಜ, ಅಮರ ಮುಡ್ನೂರು, ಅಮರಪಡ್ನೂರು, ಮರ್ಕಂಜ, ದೊಡ್ಡತೋಟ, ಪಂಜ, ಬಳ್ಪ, ಯೇನೆಕಲ್ಲು, ಸುಬ್ರಹ್ಮಣ್ಯ ಭಾಗದ ಕೃಷಿಕರೂ ಈಗಾಗಲೇ ಔಷಧಿಗೆ ಡ್ರೋನ್ ಬುಕ್ಕಿಂಗ್ ಮಾಡಿದ್ದಾರೆ ಎಂದು ಡ್ರೋನ್ ಮೂಲಕ ಔಷಧಿ ಸಿಂಪಡಣೆಯನ್ನು ನಡೆಸಿದ ಕೃಷಿಕ ಸುದರ್ಶನ್ ಕೋಟೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಡಕೆ ಬೆಳೆಗಾರರನ್ನು ಹಿಂಡಿಹಿಪ್ಪೆ ಮಾಡುತ್ತಿರುವ ಎಲೆಚುಕ್ಕಿ ರೋಗ