ಬೆಳ್ತಂಗಡಿ(ಮಂಗಳೂರು): ನಮ್ಮ ಆಶ್ರಮದ ಸಿಬ್ಬಂದಿ ಕೋವಿಡ್ಗೆ ಚಿಕಿತ್ಸೆ ಪಡೆದು ಈಗ ಎಲ್ಲರೂ ಗುಣಮುಖರಾಗಿ ತೆರಳಿದ್ಧಾರೆ. ಹೀಗಾಗಿ, ಮಾನವೀಯ ಕಾರ್ಯದಲ್ಲಿ ಚಿಕ್ಕ ಸೇವೆ ಸಲ್ಲಿಸಿದ ಸಂತೃಪ್ತಿ ನಮಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸನ್ನಿಧಿಯ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಗಂಡಿಬಾಗಿಲು ಸಿಯೋನ್ ಆಶ್ರಮದ ಸಿಬ್ಬಂದಿಗೆ ಕೋವಿಡ್ ಹರಡಿದ್ದ ಹಿನ್ನೆಲೆ ಅವರನ್ನು ಧರ್ಮಸ್ಥಳದ ರಜತಾದ್ರಿ ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಲಾಗಿತ್ತು. ಇದೀಗ ಅವರೆಲ್ಲಾ ಗುಣಮುಖರಾಗಿ ಆಶ್ರಮಕ್ಕೆ ಹಿಂದಿರುಗುತ್ತಿದ್ದಾರೆ. ಅವರನ್ನು ಬೀಳ್ಕೊಡುವ ಕಾರ್ಯಕ್ರಮ ಉದ್ಧೇಶಿಸಿ ಧರ್ಮಾಧಿಕಾರಿಗಳು ಮಾತನಾಡಿದರು.
ಸಿಯೋನ್ ಆಶ್ರಮದಲ್ಲಿ ಇರುವವರಿಗೆ ಕೋವಿಡ್ ಹರಡಿ ಆತಂಕಕ್ಕೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ತಾಲೂಕಿನ ಶಾಸಕರು ಹೇಳಿದಂತೆ ಮೊದಲು ಅಲ್ಲಿದ್ದ ಎಲ್ಲಾ ಕೊರೊನಾ ಸೋಂಕಿತರನ್ನು ಶಿಫ್ಟ್ ಮಾಡಲಾಯಿತು. ಶಾಸಕರ ಮಾರ್ಗದರ್ಶನದಂತೆ ಧರ್ಮಸ್ಥಳದ ರಜತಾದ್ರಿ ವಸತಿ ಗೃಹವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ ಅವರಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಕ್ಷೇತ್ರದಿಂದ ಕರ್ನಾಟಕದ ಪ್ರತಿ ನಗರಗಳಲ್ಲಿ, ಗ್ರಾಮಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಸೇವೆಗಳು ನಡೆಯುತ್ತಿದೆ. ನಮ್ಮಿಂದ ಸಾಧ್ಯವಾದಷ್ಟು ಸೇವೆಯನ್ನು ನಾವು ಮಾಡುತ್ತಿದ್ದೇವೆ. ಅದಲ್ಲದೆ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಶೀಘ್ರವಾಗಿ ಎಲ್ಲಾ ಸೋಂಕಿತರು ಗುಣಮುಖರಾಗುತ್ತಿದ್ದು, ಸೋಂಕು ಹರಡುತ್ತಿರುವುದು ಕಡಿಮೆಯಾಗುತ್ತಿದೆ ಎಂದರು.
ನಾವು ನಮ್ಮನ್ನು ರಕ್ಷಿಸಿಕೊಳ್ಳಬೇಕು ಎಂಬ ಆತ್ಮವಿಶ್ವಾಸ ಎಲ್ಲರಲ್ಲೂ ಮೂಡಿದೆ. ಲಸಿಕೆ ತೆಗೆದುಕೊಳ್ಳಬೇಕು, ಮಾಸ್ಕ್ ಧರಿಸಬೇಕು, ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಆರೋಗ್ಯವಂತಾಗಿರಲು ಸಾಧ್ಯ ಎಂಬ ವಿಶ್ವಾಸ ಹುಟ್ಟಿದೆ. ಈ ವಿಶ್ವಾಸ ಎಲ್ಲ ಜನರು ಉಳಿಸಿಕೊಳ್ಳಬೇಕು ಎಂದು ನಾಡಿನ ಜನರಲ್ಲಿ ವಿನಂತಿ ಮಾಡುತ್ತಿದ್ದೇನೆ. ಯಾರೂ ಭಯ ಪಡಬೇಡಿ, ಆಲಸ್ಯ ಮಾಡಬೇಡಿ ಎಂದು ಮನವಿ ಮಾಡಿದರು.
150 ಮಂದಿ ಬಿಡುಗಡೆ:
ಧರ್ಮಸ್ಥಳದ ಗಂಡಿಬಾಗಿಲಿನ ಸಿಯೋನ್ ಆಶ್ರಮದ ಹಿರಿಯ ನಾಗರಿಕರು ಹಾಗೂ ಕೆಲ ಬುದ್ಧಿಮಾಂದ್ಯರೂ ಸೇರಿ 226 ಮಂದಿಗೆ ರಜತಾದ್ರಿ ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ 150 ಜನರು ಸದ್ಯ ಸಂಪೂರ್ಣ ಚೇತರಿಸಿಕೊಂಡಿದ್ದು, ಮರಳಿ ಆಶ್ರಮಕ್ಕೆ ತೆರಳಿದ್ದಾರೆ. ಈ ಸಂಬಂಧ ಬಿಡುಗಡೆ ಹೊಂದಿದವರಿಗೆ ವಿದಾಯ ಕಾರ್ಯಕ್ರಮ ಹಾಗೂ ಸಮಾಜಮುಖಿ ಕಾರ್ಯದಲ್ಲಿ ಕೈಜೋಡಿಸಿದವರಿಗೆ ಕೃತಜ್ಞತಾ ಸಮಾರಂಭ ನಡೆಯಿತು. ಇನ್ನುಳಿದವರು ಸದ್ಯದಲ್ಲೇ ಸೆಂಟರ್ನಿಂದ ಮರಳಲಿದ್ದಾರೆ.
ಇದನ್ನೂ ಓದಿ: ರಾಜ್ಯಾದ್ಯಂತ ಭಾನುವಾರವೂ ರಜೆ ಕೊಡದ ಮಳೆರಾಯ : ಕರಾವಳಿಯಲ್ಲಿ ಭಾರಿ ಮಳೆ, 'ಹೈ-ಕ' ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್