ಪುತ್ತೂರು: ನಮ್ಮ ಬದುಕಿನಲ್ಲಿ ನಡೆದಾಡಿದ ವಿಶ್ವಕೋಶ ಎಂದೇ ಬಿಂಬಿತರಾಗಿದ್ದ ಡಾ. ಶಿವರಾಮ ಕಾರಂತರು ವಾಸ್ತವವನ್ನು ಆಳವಾಗಿ ಅರಿತುಕೊಂಡವರಾಗಿದ್ದು, ಕಂಡದ್ದನ್ನು ಕಂಡಂತೆ ಹೇಳುವ ಗುಣ ಅವರಲ್ಲಿತ್ತು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರಿನಿವಾಸ ಪೂಜಾರಿ ಹೇಳಿದರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತರ ಬಾಲವನ ಪುತ್ತೂರು, ಸಹಾಯಕ ಆಯುಕ್ತರ ಕಚೇರಿ ಪುತ್ತೂರು ಇವುಗಳ ಸಹಯೋಗದಲ್ಲಿ ಶನಿವಾರ ಪರ್ಲಡ್ಕದಲ್ಲಿರುವ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ನಡೆದ ಡಾ. ಶಿವರಾಮ ಕಾರಂತರ ಜನ್ಮ ದಿನಾಚರಣೆ ಹಾಗೂ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಕಟ್ಟ ಕಡೆಯ ಜನರನ್ನೂ ಪ್ರೀತಿಸುತ್ತಿದ್ದ ಕಾರಂತರು ಎಲ್ಲ ಕ್ಷೇತ್ರಗಳಲ್ಲಿಯೂ ಛಾಪು ಮೂಡಿಸುವ ಮೂಲಕ ಎತ್ತರವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಟೀಕೆ ಮತ್ತು ಹೊಗಳಿಕೆ ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತಿದ್ದ ಅವರು ಎಲ್ಲವನ್ನೂ ಮತ್ತು ಎಲ್ಲರನ್ನೂ ಸಮಾನವಾಗಿ ಕಂಡವರು. ಅವರ ಕರ್ಮ ಭೂಮಿಯಾದ ಪುತ್ತೂರಿನ ಡಾ. ಕಾರಂತರ ಬಾಲವನವನ್ನು ರಾಜ್ಯಕ್ಕೆ ಮಾದರಿಯಾಗುವ ಶ್ರೇಷ್ಠ ತಾಣವಾಗಿ ರೂಪುಗೊಳಿಸಲಾಗುವುದು ಎಂದು ಹೇಳಿದರು.
ಡಾ. ಶಿವರಾಮ ಕಾರಂತ ಮತ್ತು ಬಾಲವನ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ವಿದ್ವಾಂಸ ಪ್ರೊ. ಡಾ. ಅಮೃತ ಸೋಮೇಶ್ವರ ಕುರಿತು ಅಭಿನಂದನಾ ಮಾತುಗಳನ್ನಾಡಿದ ಪುತ್ತೂರು ವಿವೇಕಾನಂದ ಕಾಲೇಜ್‌ನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಹೆಚ್.ಜಿ. ಶ್ರೀಧರ, ಕಾರಂತ ಮತ್ತು ಅಮೃತರು ತಮ್ಮ ಹುಟ್ಟೂರನ್ನು ಬಿಟ್ಟು ಪುತ್ತೂರಿನಲ್ಲಿ ನೆಲೆಸಿ ಜೀವಮಾನದ ಅಪೂರ್ವ ಸಾಧನೆಗಳನ್ನು ಮಾಡಿ ಮತ್ತೆ ಹುಟ್ಟೂರಿಗೆ ಮರಳಿದವರು. ಕಾರಂತರ ಮತ್ತು ಅಮೃತರ ಆಸಕ್ತಿ ಹಾಗೂ ಸಾಧನೆಗಳಿಗೆ ಬಹಳಷ್ಟು ಸಾಮೀಪ್ಯವಿದೆ ಎಂದು ವಿಶ್ಲೇಷಿಸಿದರು.
ಮನೆಗೆ ತೆರಳಿ ಪ್ರಶಸ್ತಿ ಪ್ರದಾನ:
ಅನಾರೋಗ್ಯದ ಹಿನ್ನೆಲೆಯಲ್ಲಿ ಬಾಲವನ ಪ್ರಶಸ್ತಿ ಪುರಸ್ಕೃತ ಪ್ರೊ. ಡಾ. ಅಮೃತ ಸೋಮೇಶ್ವರ ಅವರು ಪ್ರಶಸ್ತಿ ಸ್ವೀಕರಿಸಲು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಅವರ ಸೊಸೆ ರಾಜೇಶ್ವರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಸಚಿವರು, ಶಾಸಕರು, ಸಹಾಯಕ ಕಮಿಷನರ್ ಜೊತೆ ಸೇರಿ ಮಂಗಳೂರಿನ ಕೋಟೆಕಾರ್ ಅಡ್ಕದಲ್ಲಿರುವ ಅಮೃತ ಸೋಮೇಶ್ವರ ಅವರ ಮನೆಗೆ ತೆರಳಿ ಪ್ರಶಸ್ತಿ ಪ್ರದಾನ ಮಾಡಿದರು.
ಸಮಾರಂಭದಲ್ಲಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲೂಕು ಪಂಚಾಯತ್ ಅಧ್ಯಕ್ಷ ಕೆ.ರಾಧಾಕೃಷ್ಣ ಬೋರ್ಕರ್, ಪುತ್ತೂರು ಸಹಾಯಕ ಕಮೀಷನರ್ ಹಾಗೂ ಬಾಲವನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ. ಯತೀಶ್ ಉಳ್ಳಾಲ ಮತ್ತು ಇನ್ನಿತರರು ಉಪಸ್ಥಿತರಿದ್ದರು.