ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದ ಸಾಧನೆಯನ್ನು ಕಂಡು ದ್ವೇಷ ಸಾಧಿಸುತ್ತಿರುವ ಕೆಲವರು ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ಈ ಕುರಿತು ನಮಗೆ ಯಾವುದೇ ಭಯವಿಲ್ಲ. ನಾವು ನೈತಿಕವಾಗಿ ಗಟ್ಟಿಯಾಗಿದ್ದೇವೆ. ನಮಗೆ ಕೋಟ್ಯಂತರ ಅಭಿಮಾನಿಗಳ ಬಳಗವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಬುಧವಾರ ಬೀಡಿನಲ್ಲಿ (ಹೆಗ್ಗಡೆಯವರ ನಿವಾಸ) ವಿಭಾಗೀಯ ಮುಖ್ಯಸ್ಥರ ಸಭೆ ನಡೆಸಿ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಹಾಗೂ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಅವರು ಮಾತನಾಡಿದರು. "ಧರ್ಮಸ್ಥಳ ಕ್ಷೇತ್ರದಲ್ಲಿ ಕಳೆದ 60 ವರ್ಷಗಳಲ್ಲಿ ಬಹಳ ಬದಲಾವಣೆ ಆಗಿದೆ. ಹಲವು ಸೇವೆ ಮಾಡಿಕೊಂಡು ಬಂದಿದ್ದೇವೆ. ಒಳ್ಳೆಯ ಕೆಲಸ ಅನ್ನೋದು ಎರಡು ರೀತಿಯ ಕತ್ತಿ ಇದ್ದ ಹಾಗೆ. ಅದು ಎರಡೂ ಕಡೆಯಿಂದಲೂ ಕುಯ್ಯುತ್ತದೆ. ಪ್ರಚಾರದ ದೃಷ್ಟಿಯಿಂದ ಒಳ್ಳೆಯದು ಆದ್ರೆ ದ್ವೇಷ ಕೂಡ ಉಂಟುಮಾಡುತ್ತದೆ" ಎಂದರು.
ಇದನ್ನೂ ಓದಿ : ವೀರೇಂದ್ರ ಹೆಗ್ಗಡೆ ಗೌರವಕ್ಕೆ ಚ್ಯುತಿ ಪ್ರಕರಣ: ಸೋಮನಾಥ್ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್
ಸಿಬಿಐ ತನಿಖೆಗೆ ಅಂದಿನ ಸಿಎಂಗೆ ಪತ್ರ ಬರೆದಿದ್ದೆ- ಹೆಗ್ಗಡೆ: ಬಾಲಕಿಯ ಕೊಲೆ ಪ್ರಕರಣದ ಕುರಿತು ಮಾತನಾಡಿದ ಅವರು, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಅಂದಿನ ಮುಖ್ಯಮಂತ್ರಿಯವರಿಗೆ ಕೋರಿದ್ದೇ ನಾನು. ತನಿಖೆ ಮಾಡುವಂತೆ ಸರ್ಕಾರಕ್ಕೆ ನಾನೇ ಮೊದಲು ಪತ್ರ ಬರೆದಿದ್ದೆ. ಸಿಬಿಐಸಹಿತ ಯಾವುದೇ ತನಿಖೆ ಮಾಡಿದರೂ ಅದನ್ನು ಸ್ವಾಗತಿಸುತ್ತೇವೆ. ಕೆಲವರು ದುರುದ್ದೇಶಪೂರ್ವಕವಾಗಿ ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸಲು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ನೋವು ತಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ತನಿಖೆ, ಸಂಶೋಧನೆ ಮಾಡಲಿ, ಅದರಿಂದ ನಮಗೆ ಯಾವುದೇ ತೊಂದರೆ ಇಲ್ಲ. ಆದರೆ ಕ್ಷೇತ್ರದ ವಿಷಯವನ್ನು ಯಾಕೆ ಮಧ್ಯೆ ಎಳೆಯುತ್ತಿದ್ದಾರೆ ಅಂತ ಗೊತ್ತಾಗುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ : ವೀರೇಂದ್ರ ಹೆಗ್ಗಡೆ ಬಗ್ಗೆ ಸುಳ್ಳು ಸುದ್ದಿ ಪ್ರಕರಣ: ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಸೋಮನಾಥ್ ನಾಯಕ್ಗೆ ಶಿಕ್ಷೆ
"ನನಗೆ ಯಾವ ಸಂಕೋಚ ಅಥವಾ ಸಂದೇಹವೂ ಇಲ್ಲ. ನಾನು ಹಿಂದೆ ಹೇಗಿದ್ದೇನೋ ಈಗಲೂ ಹಾಗೆಯೇ ಇದ್ದೇನೆ. ಬೆಳಗ್ಗೆಯಿಂದ ಸಂಜೆಯವರೆಗೆ ಅನೇಕ ಕಾರ್ಯಗಳಲ್ಲಿ ತೊಡಗಿರುತ್ತೇನೆ. ಅನವಶ್ಯಕವಾಗಿ ಶತ್ರುತ್ವ ಬೆಳೆಸುತ್ತಿರುವುದಕ್ಕೆ ಕಾರಣ ತಿಳಿಯುತ್ತಿಲ್ಲ. ಸಂಭಾಷಣೆ ಪ್ರಾರಂಭ ಆಗಬಾರದು ಎನ್ನುವ ಕಾರಣಕ್ಕೆ ನಾನು ಈವರೆಗೂ ಮಾತನಾಡಲಿಲ್ಲ" ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ : ವೀರ ಕಂಬಳ ಸಿನಿಮಾದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಟನೆ
"ಅನೇಕರು ಕ್ಷೇತ್ರಕ್ಕೆ ಬಂದು ಕಣ್ಣೀರು ಹಾಕುತ್ತಿದ್ದಾರೆ. ನಿಮಗೆ ಹೀಗಾದರೆ ಹೇಗೆ ತಡೆದುಕೊಳ್ಳುವುದು ಎಂದು ಹೇಳ್ತಿದ್ದಾರೆ. ನಮ್ಮ ಆತ್ಮ ಮತ್ತು ವ್ಯವಹಾರ ಎಲ್ಲವೂ ಸ್ವಚ್ಛವಾಗಿದೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುವ ಅಗತ್ಯವಿಲ್ಲ. ನಮ್ಮ ದಾರಿಯ ಮಧ್ಯೆ ಮೋಡ ಬಂದಿದೆ. ಅದನ್ನು ದೇವರೇ ತೆಗೆಯುತ್ತಾನೆ. ನಾವು ಯಾರಿಗೂ ಯಾವ ಅನ್ಯಾಯಕ್ಕೂ ಸಹಕಾರ ಕೊಡುವುದಿಲ್ಲ. ವೈಯಕ್ತಿಕ ಅವಮಾನ ಮತ್ತು ಸಂಭಾಷಣೆ ಸರಿಯಲ್ಲ" ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.
ಇದನ್ನೂ ಓದಿ : ಧರ್ಮಸ್ಥಳ ಮಂಜುನಾಥ ಸ್ವಾಮಿ ಮೊರೆಹೋದ ಶರಾವತಿ ಮುಳುಗಡೆ ಸಂತ್ರಸ್ತರು