ಮಂಗಳೂರು: ಹಿಂದೂ ಸಮಾಜ ಶಸ್ತ್ರ ಹಾಗೂ ಶಾಸ್ತ್ರದಲ್ಲಿ ನಂಬಿಕೆ ಇರಿಸಿರುವ ಧರ್ಮ, ಆದ್ದರಿಂದ ಹಿಂದೂ ಸಮಾಜ ಕೆಣಕುವ ಪ್ರಯತ್ನ ಬೇಡ. ಈವರೆಗೆ ಶಾಸ್ತ್ರದಲ್ಲಿ ಹೇಳಿದ್ದೇವೆ, ಮುಂದಿನ ದಿನಗಳಲ್ಲಿ ಶಸ್ತ್ರವನ್ನು ಹಿಡಿಯುವ ಅನಿವಾರ್ಯತೆಗೆ ದೂಡಬೇಡಿ ಎಂದು ಅಖಿಲ ಭಾರತ ಹಿಂದೂ ಸಮಾಜದ ಸಂಸದೀಯ ಕಾರ್ಯದರ್ಶಿ ಧರ್ಮೇಂದ್ರ ಎಚ್ಚರಿಕೆ ನೀಡಿದರು.
ನಗರದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ನಟ ಅಕ್ಷಯ್ ಕುಮಾರ್ ಅವರ ಲಕ್ಷ್ಮಿ ಬಾಂಬ್ ಸಿನಿಮಾ ನವೆಂಬರ್ 9ರಂದು ತೆರೆ ಕಾಣುತ್ತಿದೆ. ಈ ಸಿನಿಮಾಕ್ಕೆ ಉದ್ದೇಶಪೂರ್ವಕವಾಗಿ ಲಕ್ಷ್ಮಿಬಾಂಬ್ ಎಂಬ ಹೆಸರನ್ನಿರಿಸಿದ್ದು, ದೀಪಾವಳಿ ಸಂದರ್ಭದಲ್ಲಿ ರಿಲೀಸ್ ಮಾಡುತ್ತಿರುವುದು ಷಡ್ಯಂತರದ ಒಂದು ಭಾಗವಾಗಿದೆ. ಹಿಂದೂ ಮಹಾಸಭಾ ಲಕ್ಷ್ಮಿ ಬಾಂಬ್ ಸಿನಿಮಾದ ಬಗ್ಗೆ ತನಿಖೆ ಮಾಡಿದಾಗ ಕಂಡು ಕೊಂಡ ಸತ್ಯ ಏನೆಂದರೆ, ದಾವೂದ್ ಇಬ್ರಾಹಿಂ ಹಾಗೂ ಪಾಕಿಸ್ತಾನದ ಭೂಗತಲೋಕದಿಂದ ಈ ಸಿನಿಮಾಕ್ಕೆ ಒಂದಷ್ಟು ಹಣ ಬರುತ್ತಿದೆ. ಈ ಮೂಲಕ ಹಿಂದೂ ಸಮಾಜವನ್ನು ಕೀಳುಮಟ್ಟದಲ್ಲಿ ಕಂಡು ಹಿಂದೂ ಸಂಘಟನೆಗಳ ಆಂತರಿಕ ಶಕ್ತಿ ಕುಗ್ಗಿಸುವ ಹುನ್ನಾರ ನಡೆಯುತ್ತಿದೆ. ಹಿಂದೂಗಳನ್ನು ಕೆಣಕುವುದು ಒಳಿತಲ್ಲ, ನಮ್ಮ ಕೈಯಲ್ಲಿ ಶಸ್ತ್ರ ಹಿಡಿಯುವಂತೆ ಮಾಡುವುದು ಸಮಂಜಸವಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಹೆಚ್ಚಿನ ಸಿನಿಮಾಗಳಲ್ಲಿ ಹಿಂದೂಗಳನ್ನು ಅತ್ಯಂತ ತುಚ್ಛವಾಗಿ ಕಾಣಲಾಗುತ್ತಿದೆ. ಬಹುಸಂಖ್ಯಾತ ಹಿಂದೂಗಳ ಆರಾಧ್ಯ ದೇವರಾದ ಲಕ್ಷ್ಮಿ ದೇವಿಯ ಹೆಸರನ್ನು ಸಿನಿಮಾಕ್ಕೆ ಇಟ್ಟಿರುವುದು ಹಿಂದೂಗಳ ಭಾವನೆಗೆ ಧಕ್ಕೆ ತಂದಂತಾಗಿದೆ. ಅಲ್ಲದೇ ಮುಸ್ಲಿಂ ನಾಯಕ ಹಾಗೂ ಹಿಂದೂ ನಾಯಕಿ ಸಂಬಂಧವನ್ನು ತೋರಿಸುವ ಮೂಲಕ ಉದ್ದೇಶಪೂರ್ವಕವಾಗಿ ಲವ್ ಜಿಹಾದ್ಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಆದ್ದರಿಂದ ಸರ್ಕಾರ ಲಕ್ಷ್ಮಿ ಬಾಂಬ್ ಸಿನಿಮಾ ಪ್ರದರ್ಶನಕ್ಕೆ ನಿರ್ಬಂಧ ಹೇರಬೇಕು. ಪ್ರದರ್ಶನ ಆಗಬೇಕಾದರೆ ನಿಷೇಧಿತ ದೃಶ್ಯ ತೆಗೆಯಬೇಕು ಎಂದು ಧರ್ಮೇಂದ್ರ ಆಗ್ರಹಿಸಿದರು.
ಕಾಶ್ಮೀರದ ಮೆಹಬೂಬಾ ಮುಫ್ತಿ ಅವರು ಹೇಳಿಕೆಯೊಂದನ್ನು ನೀಡಿದ್ದು, ಕಾಶ್ಮೀರದಲ್ಲಿ 370 ವಿಧಿಯನ್ನು ಮತ್ತೆ ಪುನರ್ ಸ್ಥಾಪಿಸುವವರೆಗೆ ದೇಶದ ರಾಷ್ಟ್ರ ಧ್ವಜ ಮುಟ್ಟುವುದಿಲ್ಲ, ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡುವುದಿಲ್ಲ ಎಂದು. ಹಾಗಾದರೆ ಮೆಹಬೂಬಾ ಮುಫ್ತಿ ಅವರು ಯಾವ ದೇಶದಲ್ಲಿದ್ದಾರೆ, ಭಾರತದ ನೆಲ, ಜಲ, ಸಂಸ್ಕೃತಿ, ಸಂವಿಧಾನವನ್ನು ಗೌರವಿಸದಿದ್ದಲ್ಲಿ ಅಂತವರು ಇಲ್ಲಿ ಇರುವುದಾದರೂ ಏಕೆ? ಈ ದೇಶಬಿಟ್ಟು ಹೋಗಬಹುದು. ಮೆಹಬೂಬಾ ಮುಫ್ತಿ ಅವರು ಈ ರೀತಿಯಲ್ಲಿ ದೇಶವಿರೋಧಿ ಹೇಳಿಕೆ ಕೊಡುವಾಗ ಕೇಂದ್ರ ಸರ್ಕಾರ ಏನು ಮಾಡುತ್ತಿದೆ. ತಕ್ಷಣ ಕೇಂದ್ರ ಸರ್ಕಾರ ಮೆಹಬೂಬಾ ಮುಫ್ತಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಹಿಂದೂಗಳಿಗೆ ತೊಂದರೆಗಳಾಗುತ್ತಿದ್ದು, ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಹಾಗೂ ಆಹಾರ ಜಿಹಾದ್ ಗಳೆಂಬ ಕೆಟ್ಟ ಪರಂಪರೆಗಳನ್ನು ನಮ್ಮ ದೇಶದ ಮೇಲೆ ಹೇರಲ್ಪಡಲಾಗುತ್ತಿದೆ. ಬಹುಸಂಖ್ಯಾತ ಹಿಂದೂಗಳು ಅಲ್ಪ ಸಂಖ್ಯಾತರಾಗಲು ಹೆಚ್ಚು ದಿನಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.