ಮಂಗಳೂರು: ಆಯಾಯ ದೇವರಿಗೆ ಸಲ್ಲಬೇಕಾದ ರೀತಿಯಲ್ಲಿಯೇ ಪೂಜೆ ನಡೆಯಬೇಕೇ ಹೊರತು ಪುರೋಹಿತರಿಗೆ ಬೇಕಾದ ರೀತಿಯಲ್ಲಿ ಪೂಜೆ ನಡೆಸೋದು ಒಪ್ಪದ ಮಾತು. ಆದ್ದರಿಂದ ಅವರು ಮನೆಯಲ್ಲಿ ಯಾವ ರೀತಿ ಬೇಕಾದರೂ ಪೂಜೆ ನಡೆಸಲಿ. ಆದರೆ ಸಾರ್ವಜನಿಕ ದೇವಸ್ಥಾನಗಳಲ್ಲಿ ದೇವರ ಪೂಜೆಯಲ್ಲಿ ತಾರತಮ್ಯ ನಡೆಸೋದು ಸರಿಯಲ್ಲ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಮಹೇಶ್ ಕುಮಾರ್ ಕೆ.ಎಸ್. ಕಿಡಿಕಾರಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿರುವ ಅವರು, ಕಳೆದ ಎರಡು ವಾರಗಳ ಹಿಂದೆ ಧಾರ್ಮಿಕ ದತ್ತಿ ಇಲಾಖೆಗೆ ಸೇರಲ್ಪಟ್ಟ ಪ್ರಸಿದ್ಧ ದೇವಾಲಯವಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪೂಜೆಯ ವಿಚಾರದಲ್ಲಿ ಗೊಂದಲಗಳು ಸೃಷ್ಟಿಯಾಗಿವೆ. ಸಾರ್ವಜನಿಕ ದೇವಸ್ಥಾನಗಳಲ್ಲಿ ಆಯಾಯ ದೇವರಿಗೆ ಸಲ್ಲಬೇಕಾದ ರೀತಿಯಲ್ಲೇ ಪೂಜೆ ನಡೆಯಬೇಕೇ ಹೊರತು ಅಂತರ್ಯಾಮಿ ಪೂಜೆ ಸಲ್ಲದು. ಇದು ಶೈವ - ವೈಷ್ಣವ ವಿವಾದ ಅಲ್ಲ. ಹಿಂದೂ ಏಕತೆಯ ವಿಚಾರವಾಗಿದೆ ಎಂದು ಹೇಳಿದರು.
ಓದಿ:ಖಾಸಗಿ ಬಸ್ನಲ್ಲಿ ವಿದ್ಯಾರ್ಥಿಗಳ ಅಪಾಯಕಾರಿ ಪ್ರಯಾಣ: ಫೋಟೋ ವೈರಲ್
ಮಾಧ್ವರ ಬಗ್ಗೆ ನಮ್ಮ ವಿರೋಧವಿಲ್ಲ. ಶಿವಳ್ಳಿ ಬ್ರಾಹ್ಮಣರ ಪೈಕಿ ಶೇ. 75ರಷ್ಟು ಮಂದಿ ಎಲ್ಲಾ ದೇವರನ್ನು ಪೂಜಿಸುತ್ತಾರೆ. ಆದರೆ ಶಿವಳ್ಳಿಯಲ್ಲಿ ಶೇ. 25ರಷ್ಟು ಮಾಧ್ವ ಬ್ರಾಹ್ಮಣರು ಮಾತ್ರ ಎಲ್ಲಾ ದೇವರನ್ನು ಪೂಜಿಸುವುದಿಲ್ಲ. ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹೇಗೆ ಪೂಜೆ ಮಾಡಬೇಕೆಂದು ಒಂದು ನಿಯಮವಿದೆ. ಅದನ್ನು ಬಿಟ್ಟು ಈಗ ಪುರೋಹಿತರುಗಳಿಗೆ ಬೇಕಾದ ರೀತಿಯಲ್ಲಿ ಪೂಜೆ ನಡೆಸಲಾಗುತ್ತಿದೆ. ಇದನ್ನು ಸರ್ಕಾರದ ಗಮನಕ್ಕೂ ತಂದಿದ್ದೇವೆ. ಈ ಕೂಡಲೇ ಎಲ್ಲಾ ದೇವಸ್ಥಾನಗಳಲ್ಲಿ ಆಯಾಯ ರೀತಿಯಲ್ಲಿ ಹೇಗೆ ಪೂಜೆ ನಡೆಯುತ್ತಿತ್ತೋ ಅದೇ ರೀತಿ ಪೂಜೆ ನಡೆಯಬೇಕು ಎಂದು ಮಹೇಶ್ ಕುಮಾರ್ ಕೆ.ಎಸ್. ಒತ್ತಾಯಿಸಿದರು.