ಮಂಗಳೂರು: ವಿಚ್ಛೇದಿತ ಪತ್ನಿಯ ಮಾನಹರಣ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಪಿಟಿಸಿಎಲ್ ನಿವೃತ್ತ ಇಂಜಿನಿಯರ್ ಕೋಚು ಶೆಟ್ಟಿ ಎಂಬಾತ ದೋಷಿ ಎಂದು ತೀರ್ಮಾನಿಸಿರುವ ಹೈಕೋರ್ಟ್ ಒಂದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಇಲ್ಲಿನ ಎಲಿಂಜೆ ನಿವಾಸಿ ಕೋಚು ಶೆಟ್ಟಿ ಕೆಪಿಟಿಸಿಎಲ್‌ನಲ್ಲಿ ಮಂಗಳೂರು ಮತ್ತು ಪುತ್ತೂರಿನಲ್ಲಿ ಕರ್ತವ್ಯದಲ್ಲಿದ್ದರೆ, ವಿಚ್ಛೇದಿತ ಪತ್ನಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದರು.
ಕೋಚು ಶೆಟ್ಟಿ ಹಾಗೂ ಆತನ ಪತ್ನಿಗೆ ವಿಚ್ಛೇದನವಾಗಿತ್ತು. ಆದರೂ ಆರೋಪಿ ಆಕೆಗೆ ಕಿರುಕುಳ ನೀಡುವುದನ್ನು ಮುಂದುವರಿಸಿದ್ದನು. ಬೇರೆಯವರ ಹೆಸರಿನಲ್ಲಿ ಪತ್ರಗಳನ್ನು ಬರೆದು ಸುಳ್ಳು ಪುರಾಣಗಳನ್ನು ಕಟ್ಟಿ ಅವರ ಚಾರಿತ್ರ್ಯ ವಧೆ ಮಾಡುತ್ತಿದ್ದನು. ಬ್ಯಾಂಕ್ ಸಿಬ್ಬಂದಿಯ ಮುಂದೆ ಆಕೆಯ ಚಾರಿತ್ರ್ಯ ವಧೆ ಮಾಡಲು ಬ್ಯಾಂಕ್ ವಿಳಾಸಕ್ಕೂ ಪತ್ರ ರವಾನಿಸುತ್ತಿದ್ದ ಎಂದು ತಿಳಿದು ಬಂದಿದೆ.
ವಿಚ್ಛೇದಿತ ಪತಿಯ ಕೈ ಬರಹವನ್ನು ಗುರುತು ಹಿಡಿದ ಆಕೆ ನ್ಯಾಯವಾದಿ ಮೂಲಕ ಎಚ್ಚರಿಕೆ ನೋಟಿಸ್ ನೀಡಿದ್ದರು. ಆದರೂ ಪತ್ರ ಕಳುಹಿಸುವುದನ್ನು ನಿಲ್ಲಿಸಿರಲಿಲ್ಲ. ಇದರಿಂದ ಮನನೊಂದು ಮಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಹಿಳೆ ಮಾನಹಾನಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಅಲ್ಲಿಯೂ ಆತ ಕೈಬರಹ ತನ್ನದಲ್ಲ ಎನ್ನುವ ಸುಳ್ಳುವಾದ ಮುಂದುವರಿಸಿದ್ದ. ಆತನ ಕೈಬರಹದ ಪತ್ರಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದನ್ನು ಪರಿಶೀಲಿಸಿದ ತಜ್ಞರು, ಕೈಬರಹವು ಕೋಚು ಶೆಟ್ಟಿಯದ್ದೇ ಎಂದು ವರದಿ ನೀಡಿದ್ದರು. ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ ಆತನಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಈ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಕೇವಲ ಬೆರಳಚ್ಚು ತಜ್ಞರ ವರದಿ ಆಧಾರದಲ್ಲಿ ಶಿಕ್ಷೆ ನೀಡಿರುವುದು ತಪ್ಪು ಹಾಗೂ ಪತ್ರಗಳ ಮೂಲಕ ಮಾನಹಾನಿಯಾಗಿದೆ ಎನ್ನುವ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದು ಆರೋಪಿ ವಾದಿಸಿದ್ದನು. ಈ ವಾದ ತಳ್ಳಿಹಾಕಿರುವ ಉಚ್ಚ ನ್ಯಾಯಾಲಯ ಸಂವಿಧಾನವು ದೇಶದ ಪ್ರತಿ ಪ್ರಜೆಗೆ ಆತನ ಹೆಸರು ಮತ್ತು ಗೌರವ ಅತ್ಯಮೂಲ್ಯ ಆಸ್ತಿಯಾಗಿದ್ದು, ಅದು ಮೂಲಭೂತ ಹಕ್ಕಿನ ಅವಿಭಾಜ್ಯ ಅಂಗವಾಗಿದೆ ಎಂದು ಮಹತ್ತರ ತೀರ್ಪು ನೀಡಿದೆ.
ನಮ್ಮ ದೇಶದಲ್ಲಿ ಜೀವಕ್ಕಿಂತಲೂ ಮಾನಕ್ಕೆ ಅಧಿಕವಾದ ಮೌಲ್ಯವಿದೆ. ಮಹಿಳೆಯ ಮಾನವನ್ನು ಅನಾಮಧೇಯ ಪತ್ರಗಳ ಮೂಲಕ ಹಾನಿಗೊಳಿಸುವುದು ಗಂಭೀರವಾದ ಶಿಕ್ಷಾರ್ಹ ಅಪರಾಧವೆಂದು ಘೋಷಿಸಿ, ಆರೋಪಿ ಯಾವುದೇ ರೀತಿಯ ಕನಿಕರಕ್ಕೆ ಅರ್ಹನಲ್ಲ ಎಂದು ತೀರ್ಮಾನಿಸಿ ಮಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿರುವ ತೀರ್ಪನ್ನು ಎತ್ತಿ ಹಿಡಿದಿದೆ. ಆತನನ್ನು ತಕ್ಷಣವೇ ಬಂಧಿಸಿ ಜೈಲು ಶಿಕ್ಷೆಗೆ ಗುರಿ ಪಡಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆದೇಶ ನೀಡಿದೆ.