ಮಂಗಳೂರು: ನಗರದ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಬಂಧಿತವಾಗಿ ಕೊರೊನಾ ಸೋಂಕು ತಗುಲಿ ಮೂವರು ಮೃತಪಟ್ಟರೂ ಈವರೆಗೆ ಅದರ ಮೂಲ ಕಂಡು ಹಿಡಿಯಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆರೋಪಿಸಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರತಿದಿನ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಸಂಸದರು, ಶಾಸಕರು ಜಿಲ್ಲೆಯಲ್ಲಿ ಕೊರೊನಾ ಸೋಂಕು ತಗುಲಿ ಮೂವರ ಸಾವಿಗೆ ಕಾರಣವಾದ ಮೂಲ ಸೋಂಕಿತನ್ನು ಕಂಡು ಹುಡುಕಲಿದ್ದೇವೆ ಎಂದು ಹೇಳುತ್ತಲೇ ಇದ್ದಾರೆ. ಆದರೆ, ಇದುವರೆಗೆ ಯಾವುದೇ ಪ್ರಗತಿಯಾಗಿಲ್ಲ ಎಂದು ಡಿಸೋಜ ಹೇಳಿದರು.
ಇನ್ನೂ, ಕೋವಿಡ್ -19 ಸೋಂಕಿಗೆ ಸಂಬಂಧಿಸಿದಂತೆ ರಾಜ್ಯದಿಂದ ಹೊಸ ಯೋಜನೆಗಳನ್ನು ತರುವುದರಲ್ಲಿಯೂ ಜಿಲ್ಲಾಡಳಿತ ವಿಫಲವಾಗಿದೆ. ಮಾಸ್ಕ್, ಸ್ಯಾನಿಟೈಸರ್, ವೆಂಟಿಲೇಟರ್ ಗಳನ್ನು ತರುವುದರಲ್ಲಿಯೂ ವಿಫಲವಾಗಿದೆ. ಈಗಾಗಲೇ ನಮ್ಮಲ್ಲಿ 48 ವೆಂಟಿಲೇಟರ್ ಗಳಿವೆ. ಅದಕ್ಕೆ 25 ವೆಂಟಿಲೇಟರ್ ಗಳನ್ನು ಸೇರಿಸಲು ಜಿಲ್ಲಾಡಳಿತಕ್ಕೆ ಇನ್ನೂ ಸಾಧ್ಯವಾಗಿಲ್ಲ. ಪ್ರಧಾನಿಯವರು ತಮ್ಮ ಮೊದಲ ಭಾಷಣದಲ್ಲಿ ತಾನು ಒಂದು ಲಕ್ಷ ವೆಂಟಿಲೇಟರ್ ಖರೀದಿಸಿದ್ದೇನೆ ಎಂದಿದ್ದರು. ಇನ್ಫೋಸಿಸ್ ಕೊಟ್ಟ ಎರಡು ವೆಂಟಿಲೇಟರ್ ಬಿಟ್ಟರೆ ನಮ್ಮ ಜಿಲ್ಲೆಗೆ ಒಂದೇ ಒಂದು ವೆಂಟಿಲೇಟರ್ ಬಂದಿಲ್ಲ ಎಂದು ಐವನ್ ಡಿಸೋಜ ಕಿಡಿ ಕಾರಿದರು.
ವೆನ್ಲಾಕ್ ಜಿಲ್ಲಾಸ್ಪತ್ರೆಯಿಂದ 800 ಮಂದಿ ರೋಗಿಗಳನ್ನು ಹೊರಹಾಕಿ ಕೋವಿಡ್ ಆಸ್ಪತ್ರೆ ಎಂದು ಬೋರ್ಡ್ ಹಾಕಿದ್ದು ಮಾತ್ರ ನಮ್ಮ ಜಿಲ್ಲಾಡಳಿತದ ಸಾಧನೆಯಾಗಿದೆ. ಕೋವಿಡ್ ಸೋಂಕು ವೈರಾಲಜಿ ಲ್ಯಾಬ್ ಮಾಡಲು ಫಾದರ್ ಮುಲ್ಲರ್ ಆಸ್ಪತ್ರೆ, ಯೆನೆಪೋಯ, ಕೆ.ಎಸ್.ಹೆಗ್ಡೆ ಮುಂತಾದ ಆಸ್ಪತ್ರೆಗಳು ತಯಾರಾಗಿವೆ. ಆದರೆ, ಈವರೆಗೆ ಇವರು ಈ ನಿಟ್ಟಿನಲ್ಲಿ ಗಮನ ಹರಿಸಿಲ್ಲ. ಇದರಿಂದ ಸೋಂಕಿನ ಮೂಲ ಹುಡುಕುವುದು ಹೇಗೆ ಎಂದು ಐವನ್ ಡಿಸೋಜ ಪ್ರಶ್ನಿಸಿದರು.