ನೆಲ್ಯಾಡಿ: ಸಮಾನ ಮನಸ್ಕರ ವೇದಿಕೆಯ ನೇತೃತ್ವದಲ್ಲಿ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳು, ಊರಿನ ದಾನಿಗಳ ನೆರವಿನಿಂದ ಹಲವು ಗ್ರಾಮಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ನೆಲ್ಯಾಡಿ, ಗೋಳಿತೊಟ್ಟು, ಕೌಕ್ರಾಡಿ, ಶಿರಾಡಿ ಗ್ರಾ.ಪಂ. ಗಳಿಗೆ ಒಳಪಡುವ 7 ಗ್ರಾಮಗಳ ಸುಮಾರು 700ಕ್ಕೂ ಅಧಿಕ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಸಮಾನ ಮನಸ್ಕರ ವೇದಿಕೆಯ ಸಂಚಾಲಕ ಹಾಗೂ ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಗಳ ಸಂಚಾಲಕರೂ ಆಗಿರುವ ರೆ.ಫಾ. ವರ್ಗೀಸ್ ಕೈಪುನಡ್ಕ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದಾನಿಗಳ ನೆರವನ್ನು ಬಳಸಿಕೊಂಡು ಈ ಭಾಗದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದರು.
ಬಾಕಿ ಉಳಿದಿರುವ ಅರ್ಹರಿಗೆ ಮುಂದಿನ ದಿನಗಳಲ್ಲಿ ಇದೇ ಸಂಘಟನೆಯ ಮೂಲಕ ಯೋಜನೆಯನ್ನು ಹಾಕಿಕೊಳ್ಳಲಿದ್ದೇವೆ. ಈಗಾಗಲೇ ಈ ಭಾಗದ ಆಶಾ ಕಾರ್ಯಕರ್ತೆಯರಿಗೆ ಕೊಡೆ, ಮಾಸ್ಕ್, ಸ್ಯಾನಿಟೈಸರ್ ಒಳಗೊಂಡಂತೆ ಅಗತ್ಯ ವಸ್ತುಗಳ ಕಿಟ್‌ಗಳನ್ನೂ ವಿತರಿಸಲಾಗಿದೆ ಎಂದು ಸಮಾನ ಮನಸ್ಕರ ವೇದಿಕೆಯ ಸಂಚಾಲಕ ರೆ.ಫಾ. ವರ್ಗೀಸ್ ಕೈಪುನಡ್ಕ ತಿಳಿಸಿದರು.