ಬೆಳ್ತಂಗಡಿ: ತಾಲೂಕಿನ 81 ಗ್ರಾಮಗಳ 241 ಬೂತ್ಗಳ ಅರ್ಹ ಕುಟುಂಬಗಳಿಗೆ 30,000 ಆಹಾರ ಸಾಮಗ್ರಿಗಳ ಕಿಟ್ ವಿತರಣೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳದಲ್ಲಿ ಸಾಂಕೇತಿಕವಾಗಿ ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ವೀರೇಂದ್ರ ಹೆಗ್ಗಡೆ, ಶಾಸಕರ ವತಿಯಿಂದ "ಶ್ರಮಿಕ ನೆರವು" ಮೂಲಕ ದಾನಿಗಳ ಸಹಕಾರ ಮತ್ತು ಬದುಕು ಕಟ್ಟೋಣ ಬನ್ನಿ ತಂಡದ ಸಹಕಾರದಲ್ಲಿ ಶಾಸಕ ಹರೀಶ್ ಪೂಂಜ ಉತ್ತಮ ಸೇವೆ ಮಾಡುತ್ತಿದ್ದಾರೆ. ತಾಲೂಕಿನಲ್ಲಿ 30 ಸಾವಿರ ಕಿಟ್ ಹಸ್ತಾಂತರ ಮಾಡುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಉಜಿರೆ ರತ್ನವರ್ಮ ಕ್ರೀಡಾಂಗಣದಲ್ಲಿ ಆಹಾರ ಸಾಮಗ್ರಿ ಕಿಟ್ ವಿತರಿಸಿ ಮಾತನಾಡಿ ಹರೀಶ್ ಪೂಂಜ ಯೋಗ್ಯ ಮತ್ತು ಮಾದರಿ ಶಾಸಕರಾಗಿದ್ದು, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಈಗ ಕೊರಾನಾ ಸಂದರ್ಭದಲ್ಲೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಕೊರೊನಾವನ್ನು ಒದ್ದೋಡಿಸಬೇಕಾದರೆ ಇಂತಹ ಸಮಾಜಮುಖಿ ಕೆಲಸ ಮಾಡುವ ಶಾಸಕರ ಅಗತ್ಯವಿದೆ ಎಂದರು.
ಸಂಸದ ನಳೀನ್ ಕುಮಾರ್ ಮಾತನಾಡಿ, ತಾಲೂಕಿನ ಬಡ ಜನರ ಬಗ್ಗೆ ಅಪಾರ ಕಾಳಜಿಯುಳ್ಳ ಯುವ ನಾಯಕ ಹರೀಶ್ ಪೂಂಜ ತಾಲೂಕಿನ ಪ್ರತಿ ಬೂತ್ ಮಟ್ಟದಲ್ಲಿ ಸಂಕಷ್ಟದಲ್ಲಿರುವ ಅರ್ಹ ಕುಟುಂಬಗಳಿಗೆ ಕಿಟ್ ವಿತರಣೆ ಮಾಡುತ್ತಿರುವುದು ಸಮಾಜಕ್ಕೆ ಒಂದು ಮಾದರಿ ಕೆಲಸ ಎಂದರು.