ಸುಳ್ಯ: ''ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನಲ್ಲಿ ಪ್ರಸ್ತುತ ಕಾಡಾನೆಗಳ ದಾಳಿಯಿಂದ ಆಗಿರುವ 225 ಬೆಳೆ ನಾಶ ಪ್ರಕರಣಗಳು ನಡೆದಿವೆ. ಇದಕ್ಕಾಗಿ 38,26,024 ರೂಪಾಯಿ ಪರಿಹಾರ ನೀಡಲಾಗಿದೆ. ಕಡಬದಲ್ಲಿ ಮೂವರು ಸಾವನ್ನಪ್ಪಿರುವ ಕುರಿತು ವರದಿಯಾಗಿದೆ'' ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
''ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿರುವ ಬಹುತೇಕ ಜನರು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದ್ದು, ಜೀವನ ನಿರ್ವಹಣೆಗೆ ಕೃಷಿಯನ್ನೇ ಮೂಲ ಕಸುಬನ್ನಾಗಿ ಅವಲಂಬಿಸಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಾಡಾನೆಗಳು ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುವುದರ ಜೊತೆಗೆ ಆಸ್ತಿ ಹಾಗೂ ಜೀವಹಾನಿ ಉಂಟು ಮಾಡಿವೆ. ಈ ವಿಚಾರವು ಸರ್ಕಾರದ ಗಮನಕ್ಕೆ ಬಂದಿದೆಯೇ'' ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರು, ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅರಣ್ಯ ಇಲಾಖೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.
''ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬಸ್ಥರಿಗೆ ಒಟ್ಟು 30 ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. ಗಾಯಗೊಂಡಿದ್ದ ನಾಲ್ವರಿಗೆ ಒಟ್ಟು 17,9,142 ಪಾವತಿಯಾಗಿದೆ. ಎರಡು ಮಾಸಾಶನ ಪ್ರಕರಣಕ್ಕೆ ಸಂಬಂಧಿಸಿದಂತೆ 49,446 ರೂ. ಪಾವತಿಯಾಗಿದೆ'' ಎಂದು ಅರಣ್ಯ ಇಲಾಖೆ ಸಚಿವರು ವಿವರಿಸಿದ್ದಾರೆ. ''ಸುಳ್ಯ ತಾಲೂಕಿನಲ್ಲಿ 361 ಬೆಳೆನಾಶ ಪ್ರಕರಣಗಳಿಗೆ ಒಟ್ಟು 52,09,942 ರೂ. ಪರಿಹಾರ ನೀಡಲಾಗಿದೆ. ಗಾಯಗೊಂಡ ಓರ್ವನಿಗೆ 74,377 ರೂ. ಪರಿಹಾರ ಒದಗಿಸಲಾಗಿದೆ'' ಎಂದು ತಿಳಿಸಿದರು.
ಕಡಬ, ಸುಳ್ಯ ತಾಲ್ಲೂಕಿನಲ್ಲಿ ಮಾನವ- ಕಾಡಾನೆ ನಡುವಿನ ಸಂಘರ್ಷ ತಪ್ಪಿಸಲು ಸರ್ಕಾರ ಕೈಗೊಂಡಿರುವ ಮಾರ್ಗೋಪಾಯಗಳು:
- ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಪ್ರದೇಶದಲ್ಲಿ ಜನ ಸಂಪರ್ಕ ಸಭೆಯನ್ನು ಕರೆದು ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಲಾವುದು.
- ರೈತರಿಗೆ ಸಬ್ಸಿಡಿ ದರದಲ್ಲಿ ಸೋಲಾರ್ ಬೇಲಿ ನಿರ್ಮಾಣ ಮಾಡಲು ಉತ್ತೇಜನ ನೀಡಲಾಗುತ್ತಿದೆ. ಅರಣ್ಯದ ಅಂಚಿನಲ್ಲಿ ಬರುವ ಖಾಸಗಿ ಜಮೀನುಗಳ ಸುತ್ತಾ ಸರಕಾರದ ವತಿಯಿಂದ ದೊರಕುವ ಶೇ.50 ಸಬ್ಸಿಡಿ ಬಳಸಿಕೊಂಡು ಕಳೆದ ಮೂರು ವರ್ಷಗಳಲ್ಲಿ 4.08 ಕಿ.ಮೀ. ಸೌರಶಕ್ತಿ ಬೇಲಿ ನಿರ್ಮಿಸಲಾಗಿದೆ.
- ಆನೆ ನಿರೋಧಕ ಕಂದಕ ನಿರ್ಮಾಣ, ಸೋಲಾರ್ ತಂತಿಬೇಲಿ ನಿರ್ಮಾಣ, ಟೆಂಟಕಲ್ ಫೆನ್ಸಿಂಗ್, ಹಳ್ಳತೊರೆಗಳು ಬರುವಲ್ಲಿ ವಿಶೇಷ ವಿನ್ಯಾಸದ ಕಾಂಕ್ರೀಟ್ ರಚನೆ ಮಾಡಲಾಗಿದೆ. ಕೃಷಿ ಭೂಮಿಗೆ ಬಂದಂತಹ ಕಾಡಾನೆ ಹಿಮ್ಮೆಟ್ಟಿಸಲು ಅರಣ್ಯ ರಕ್ಷಣಾ ಶಿಬಿರ ಮತ್ತು ವನ್ಯಪ್ರಾಣಿ ಹಿಮ್ಮೆಟ್ಟಿಸುವ ತಂಡಗಳಿಂದ ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯ ನಿರ್ವಹಿಸಲಾಗುತ್ತಿದೆ.
- ನಾಗರಹೊಳೆ, ಮಡಿಕೇರಿ ವನ್ಯಜೀವಿ ವಿಭಾಗಗಳಿಂದ ನುರಿತ ಆನೆ ಕಾವಡಿಗಳನ್ನು ಮತ್ತು ಪಶು ವೈದ್ಯಾಧಿಕಾರಿಗಳನ್ನು ನಿಯೋಜಿಸಿಕೊಂಡು ನಾಡಿಗೆ ಬಂದ ಕಾಡಾನೆಯನ್ನು ಕಾಡಿಗೆ ಹಿಮ್ಮೆಟ್ಟಿಸಿರುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
- ಸಾರ್ವಜನಿಕರಲ್ಲಿ ವನ್ಯಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಾಗಾರ ಏರ್ಪಡಿಸಲಾಗುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ಇದನ್ನೂ ಓದಿ: ಮಾನವ- ಕಾಡು ಪ್ರಾಣಿಗಳ ಸಂಘರ್ಷ ತಡೆಗೆ ಅಗತ್ಯ ಕ್ರಮ: ಅರಣ್ಯ ಸಚಿವ ಖಂಡ್ರೆ