ಪುತ್ತೂರು : ನಗರದ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಮೊರಾರ್ಜಿ ದೇಸಾಯಿ, ಅಂಬೇಡ್ಕರ್ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ ಸಂಭಾವನೆ ಸಿಗದೆ ಸಂಕಷ್ಟದಲ್ಲಿದ್ದಾರೆ.
ಆದರೆ, ಇಲಾಖೆಯಡಿಯಲ್ಲೇ ಬರುವ ಅಲ್ಪಸಂಖ್ಯಾತ ವಸತಿ ನಿಲಯಗಳ ಕಾರ್ಮಿಕರಿಗೆ ಸಂಭಾವನೆ ನೀಡಿ, ಉಳಿದ ವಸತಿ ನಿಲಯಗಳ ಕಾರ್ಮಿಕರಿಗೆ ನೀಡದೆ ತಾರತಮ್ಯ ಎಸಗಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಕೊರೊನಾದಿಂದ ಜನರು ಹಲವಾರು ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಅದರಲ್ಲೂ ಖಾಸಗಿ ವಲಯಗಳಲ್ಲಿ ದುಡಿಯುತ್ತಿರುವ ಜನ ಒಂದೆಡೆ ಉದ್ಯೋಗ ಕಳೆದುಕೊಂಡ್ರೆ, ಇನ್ನೊಂದೆಡೆ ಸಂಬಳವಿಲ್ಲದೆ ದುಡಿಯಬೇಕಾದ ಸ್ಥಿತಿಯೂ ನಿರ್ಮಾಣಗೊಂಡಿದೆ. ಈ ಸಮಸ್ಯೆ ಸರ್ಕಾರಿ ವ್ಯವಸ್ಥೆಯಲ್ಲೂ ನಡೆಯುತ್ತಿರುವುದು ಇದೀಗ ಬೆಳಕಿಗೆ ಬಂದಿದೆ.
ರಾಜ್ಯ ಸಮಾಜ ಕಲ್ಯಾಣ ಇಲಾಖೆಯಡಿ ಬರುವ 817 ವಸತಿ ಶಾಲೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಸರ್ಕಾರ ಸಂಬಳ ನೀಡಿಲ್ಲ. ಕಳೆದ ಏಪ್ರಿಲ್ ತಿಂಗಳಿನಿಂದ ಸಂಬಳವಿಲ್ಲದೆ ದುಡಿಯುತ್ತಿರುವ ಈ ಕಾರ್ಮಿಕರಿಗೆ ಇದೀಗ ಜೀವನ ಸಾಗಿಸುವುದೇ ಕಷ್ಟ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂತಹ 11 ವಸತಿ ಶಾಲೆಗಳಿದ್ದು, 150ಕ್ಕೂ ಹೆಚ್ಚು ಕಾರ್ಮಿಕರು ಈ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ.
ಸರ್ಕಾರದಿಂದಲೇ ಈ ಕಾರ್ಮಿಕರಿಗೆ ಸಂಬಳ ಪಾವತಿಯಾಗುತ್ತಿದ್ದು, ಕಳೆದ ಏಪ್ರಿಲ್ನಿಂದ ಸರ್ಕಾರದಿಂದ ಬರುವ ಸಂಬಳ ನಿಂತಿದೆ. ವಿಪರ್ಯಾಸವೆಂದರೆ ಸಂಬಳ ನೀಡುವ ವಿಚಾರದಲ್ಲೂ ತಾರತಮ್ಯ ಎಸಗಲಾಗಿದೆ ಎನ್ನುವ ಆರೋಪವೂ ಕೇಳಿ ಬರಲಾರಂಭಿಸಿದೆ.
ಓದಿ: ಕಸ್ತೂರಿ ರಂಗನ್ ವರದಿಯನ್ವಯ ಗ್ರಾಮಸ್ಥರ ಒಕ್ಕಲೆಬ್ಬಿಸುವುದಿಲ್ಲ: ಸಚಿವ ಸುರೇಶ್ ಕುಮಾರ್
ಸಮಾಜ ಕಲ್ಯಾಣ ಇಲಾಖೆಯ ಅಡಿ ಬರುವ ಅಲ್ಪಸಂಖ್ಯಾತ ವಸತಿ ಶಾಲೆಯ ಕಾರ್ಮಿಕರಿಗೆ ಸಂಬಳವನ್ನು ನೀಡಲಾಗಿದೆ. ವಸತಿ ಶಾಲೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಂಬಳ ನೀಡುವಂತೆ ಸ್ಥಳೀಯ ಶಾಸಕರು, ಮುಖ್ಯಮಂತ್ರಿಗಳು ಹಾಗೂ ಪ್ರಧಾನಮಂತ್ರಿಯವರೆಗೂ ಮನವಿ ಮಾಡಲಾಗಿದೆ.
ಆದರೂ ಯಾವುದೇ ಸ್ಪಂದನೆ ದೊರತಿಲ್ಲ ಎನ್ನುವ ಅಸಹಾಯಕ ಸ್ಥಿತಿಯಲ್ಲಿ ಕಾರ್ಮಿಕರಿದ್ದಾರೆ. ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.