ಸುಳ್ಯ: ಬ್ಯಾಂಕ್ ಖಾತೆಯ ಸಂಖ್ಯೆ ನಮೂದಿಸುವ ಸಂದರ್ಭ ಅಧಿಕಾರಿಗಳ ಯಡವಟ್ಟಿನಿಂದ ಚಾರ್ವಾಕ ಗ್ರಾಮದ ವಿಶೇಷ ಚೇತನ ಬೊಮ್ಮಳಿಕೆ ಲಕ್ಷ್ಮಣ ಗೌಡ ಎಂಬುವವರ ವೇತನ ಕಳೆದ ಹತ್ತು ತಿಂಗಳಿಂದ ಇನ್ನೊಬ್ಬರ ಖಾತೆಗೆ ಜಮೆಯಾಗುತ್ತಿರುವುದು ಬೆಳಕಿಗೆ ಬಂದಿದೆ.
ಅರ್ಜಿಯ ಜೊತೆ ನೀಡಲಾದ ಬ್ಯಾಂಕ್ ಖಾತೆಯ ವಿವರವನ್ನು ( ಖಾತೆ ಸಂಖ್ಯೆ 130901011001087) ದಾಖಲಿಸುವ ಸಂದರ್ಭ ಕೊನೆಯ ಸಂಖ್ಯೆ 7ರ ಬದಲಾಗಿ 1 ಎಂದು ನಮೂದಿಸಿ ಸಿಬ್ಬಂದಿ ಪ್ರಮಾದ ಎಸಗಿದ್ದಾರೆ. ಇದರಿಂದ ಅರ್ಹ ಫಲಾನುಭವಿಯ ಖಾತೆಗೆ ಜಮೆಯಾಗಬೇಕಾದ ಪ್ರತೀ ತಿಂಗಳ 600 ರೂ. ಮಾಸಾಶನ ಇನ್ನೊಬ್ಬರ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ. ಲಕ್ಷ್ಮಣ ಗೌಡರು ಅರ್ಜಿ ಹಾಕಿದ ಬಳಿಕ ಜುಲೈ 1-2019ರಂದು ವೇತನಕ್ಕೆ ಅರ್ಹರೆಂದು ಮಂಜೂರಾತಿ ಪತ್ರ ದೊರಕಿತ್ತು.
ಆದರೂ ತನ್ನ ಖಾತೆಗೆ ಹಣ ಜಮೆಯಾಗಲಿಲ್ಲ. ಹತ್ತಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದು ಬ್ಯಾಂಕ್‍ಗೆ ಅಲೆದಾಟ ನಡೆಸಿದರೂ ಸಹ ಸಮರ್ಪಕ ಉತ್ತರ ದೊರೆಯದೆ ಇದ್ದಾಗ ಕಡಬ ತಾಲೂಕು ಕಚೇರಿಯಲ್ಲಿ ಪರಿಶೀಲಿಸಿದ್ದಾರೆ. ಆಗ ಅಧಿಕಾರಿಗಳ ಪ್ರಮಾದ ಗೊತ್ತಾಗಿದೆ. ಲಕ್ಷ್ಮಣ ಗೌಡರಿಗೆ ದೃಷ್ಟಿ ದೋಷದ ಹಿನ್ನೆಲೆ ವಿಕಲಚೇತನ ವೇತನಕ್ಕೆ ಅರ್ಜಿ ಹಾಕಿದ್ದರು. ಎರಡು ವರ್ಷಗಳ ಹಿಂದೆ ಬೆನ್ನು ಮೂಳೆಯ ಶಸ್ತ್ರ ಚಿಕಿತ್ಸೆ ಮಾಡಿಸಿದ್ದರಿಂದ ಲಕ್ಷಾಂತರ ರೂ. ಸಾಲದಲ್ಲಿದ್ದಾರೆ. ಅವರು ಈಗಾಗಲೇ ಚೇತರಿಸಿಕೊಂಡರೂ ಸಹ ದುಡಿಯುವ ಚೈತನ್ಯವನ್ನು ಕಳೆದುಕೊಂಡಿದ್ದಾರೆ. ಈಗಲೂ ಚಿಕಿತ್ಸೆ ಮುಂದುವರೆಸುತ್ತಿದ್ದು, ತಿಂಗಳಿಗೆ 2,500 ರೂ. ವೆಚ್ಚ ತಗಲುತ್ತಿದೆ. ಆದರೆ ಅಧಿಕಾರಿಗಳ ಯಡವಟ್ಟಿನಿಂದ ಹಣ ಸಿಗದೆ ಪರದಾಡುತ್ತಿದ್ದಾರೆ.