ಮಂಗಳೂರು : ತುಳು ಸೇರಿ ಪಂಚಭಾಷೆಗಳಲ್ಲಿ ಕರಾವಳಿಯ ಜನಪದ ಕ್ರೀಡೆ ಕಂಬಳದ ಬಗ್ಗೆ ಸಿನಿಮಾ ನಿರ್ಮಾಣ ಮಾಡುವ ಕನಸು ಹೊತ್ತಿದ್ದೇನೆ ಎಂದು ಖ್ಯಾತ ಸಿನಿಮಾ ನಿರ್ದೇಶಕ, ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.
ಮೂಡುಬಿದಿರೆಯ ಕೋಟಿ-ಚೆನ್ನಯ ಜೋಡುಕರೆ ಕಂಬಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರಾವಳಿಯ ಸಂಬಂಧ ಹೊಂದಿರುವ ನಾನು ಕಂಬಳದ ಬಗ್ಗೆ ಸಿನಿಮಾ ನಿರ್ಮಾಣ ಮಾಡಿ, ಪ್ರಪಂಚದೆಲ್ಲೆಡೆ ಅದರ ಮಹತ್ವ ಸಾರಬೇಕೆಂದು ಯೋಚಿಸಿದ್ದೇನೆ. ಸಿನಿಮಾದಲ್ಲಿ ಕರಾವಳಿಗರನ್ನೇ ತರಬೇತಿ ನೀಡಿ ಅಭಿನಯಿಸಲು ಅವಕಾಶ ನೀಡುವ ಆಲೋಚನೆಯಲ್ಲಿದ್ದೇನೆ.
ಕಂಬಳವನ್ನು ಪ್ರವಾಸೋದ್ಯಮದ ಜೊತೆಗೆ ಬೆಸೆದಾಗ ಕಂಬಳ ಸಹಿತ ಇತರ ರಂಗದಲ್ಲಿ ಬಹುರೂಪಿಯಾದ ಅಭಿವೃದ್ಧಿ ಸಾಧ್ಯ. ಜನರು ಮತ್ತು ಕೋಣದೊಂದಿಗೆ ಅವಿನಾಭವ ಸಂಬಂಧವೊಂದು ಕಂಬಳದೊಂದಿಗೆ ಬೆಸೆದಿದೆ. ಸ್ಪೈನ್ನಲ್ಲಿನ ಅತ್ಯಂತ ಹಿಂಸಾತ್ಮಕ ಗೂಳಿ ಕಾಳಗವನ್ನು ನಮ್ಮ ಜನರು ನೋಡುತ್ತಾರೆ.
ಆದರೆ, ಕಂಬಳದಲ್ಲಿ ಆ ತರಹದ ಯಾವುದೇ ಹಿಂಸೆ ಇಲ್ಲ. ಇಲ್ಲಿ ಕೋಣಕ್ಕೆ ಪೆಟ್ಟು ಅನ್ನುವುದು ಪ್ರೇರಣೆಗಾಗಿ ಮಾತ್ರ. ಕೋಣಗಳೊಂದಿಗೆ ಯಜಮಾನರು ಹಾಗೂ ಓಡಿಸುವವರೂ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ ಎಂಬುದನ್ನು ಕಂಬಳ ವಿರೋಧಿಗಳು ಗಮನಿಸಬೇಕು ಎಂದರು.