ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಏ.29 ರಂದು ಸಾಮಾಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ, ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಸರ್ಕಾರದ ಆದೇಶದಂತೆ ಈ ಕಾರ್ಯಕ್ರಮವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿಗಳ ಆಪ್ತ ಕಾರ್ಯದರ್ಶಿ ವೀರೂ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮೂಹಿಕ ವಿವಾಹಕ್ಕೆ ನೋಂದಾಯಿಸಿಕೊಂಡಿರುವ ಎಲ್ಲ ಜೋಡಿಗಳಿಗೂ ಕ್ಷೇತ್ರದ ವತಿಯಿಂದ ಆಶೀರ್ವಾದ ಪೂರ್ವಕವಾಗಿ ನೀಡಲಾಗುವ ವಿವಾಹ ಸಂಬಂಧಿ ವಸ್ತುಗಳಾದ ಧೋತಿ, ಸೀರೆ, ರವಿಕೆ ಕಣ, ಮಂಗಳಸೂತ್ರ ಇತ್ಯಾದಿಗಳನ್ನು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ಮುಖೇನ ವಧುವಿನ ಮನೆಗೆ ಮುಟ್ಟಿಸಲಾಗುವುದು.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಂಡಿರುವ ವಧು-ವರರು ತಮ್ಮ ಊರ ದೇವರ ಅಥವಾ ಕುಲದೇವರ ಸ್ಥಾನಗಳಲ್ಲಿ ಶಾಸ್ತ್ರೋಕ್ತವಾಗಿ ದಿನಾಂಕ 29. 4.2021ರಂದು ನಿಗದಿತವಾಗಿರುವ ಗೋಧೋಳಿ ಲಗ್ನದಲ್ಲಿ ಅಥವಾ ತಮಗೆ ಅನುಕೂಲವಾದ ದಿನಾಂಕ ಮತ್ತು ಮುಹೂರ್ತದಲ್ಲಿ ಮದುವೆ ಮಾಡಿಕೊಳ್ಳಬಹುದು.
ಮದುವೆಯ ಸಂದರ್ಭ ಯೋಜನೆಯ ಕಾರ್ಯಕರ್ತರೋರ್ವರು ಹಾಜರಿದ್ದು, ಮದುವೆಯನ್ನು ಸರಳವಾಗಿ ಸರ್ಕಾರದ ಕೋವಿಡ್ ಷರತ್ತುಬದ್ಧ ನಿಯಮಾವಳಿಯಂತೆ ಮಾಡಿಕೊಳ್ಳಲು ಸೂಚಿಸಲಾಗಿದೆ. ನಂತರ ಕಾನೂನಿನಂತೆ ವಿವಾಹ ನೋಂದಣಿಯನ್ನು ತಾಲ್ಲೂಕಿನ ಉಪನೋಂದಣಾಧಿಕಾರಿ ಕಛೇರಿಯಲ್ಲಿ ಮಾಡಿಕೊಳ್ಳಲು ಸೂಚಿಸಿದೆ.