ಬೆಳ್ತಂಗಡಿ: ಭಕ್ತರ ಹಾಗೂ ಸಿಬ್ಬಂದಿ ಸುರಕ್ಷತಾ ದೃಷ್ಟಿಯಿಂದ ಶ್ರೀಕ್ಷೇತ್ರ ಧರ್ಮಸ್ಥಳ ಆಡಳಿತ ಮಂಡಳಿ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.
ದೇವಸ್ಥಾನ ಪ್ರವೇಶಿಸುವ ದ್ವಾರದ ಬಳಿ ಭಕ್ತರಿಗೆ ಥರ್ಮಲ್ ಟೆಸ್ಟ್ ಮಾಡಲಾಗುತ್ತದೆ. ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲನೆ ಕಡ್ಡಾಯ. ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ.
ದೇವಳದ ಸುತ್ತಮುತ್ತ ಭಕ್ತರಿಗೆ ಸ್ಯಾನಿಟೈಸರ್ ನೀಡಲು ನಾಲ್ವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ದೇವಳದ ಪಾರುಪತ್ಯಗಾರ ಲಕ್ಷ್ಮಿ ನಾರಾಯಣರಾವ್ ಅವರು ಈಟಿವಿ ಭಾರತ್ಗೆ ಮಾಹಿತಿ ನೀಡಿದರು.
ಅನ್ನಪೂರ್ಣ ಛತ್ರದಲ್ಲಿ ಭಕ್ತರಿಗೆ ತೊಂದರೆಯಾಗದಂತೆ 120 ಮಂದಿ ಕುಳಿತುಕೊಳ್ಳುವ ಸಾಲಿನಲ್ಲಿ 40-50 ಮಂದಿ ಕುಳಿತು ಅನ್ನ ಪ್ರಸಾದ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆ ಹಾಗೂ ಸುರಕ್ಷತೆ ಬಗ್ಗೆ ಗಮನ ನೀಡಲಾಗುತ್ತಿದೆ ಎಂದು ಅನ್ನಪೂರ್ಣ ಛತ್ರದ ಉಸ್ತುವಾರಿ ಸುಬ್ರಹ್ಮಣ್ಯ ಪ್ರಸಾದ್ ತಿಳಿಸಿದರು.
ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಲು ಬರುವ ಭಕ್ತರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಹರಕೆ ಮುಡಿಗೂ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು ಸಾವಿರಾರು ಭಕ್ತರು ಮಂಜುನಾಥ ಸ್ವಾಮಿ ದರ್ಶನ ಪಡೆದರು.
ಮುಂಜಾನೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಪುಣ್ಯನದಿ ನೇತ್ರಾವತಿಯಲ್ಲಿ ಭಕ್ತರಿಗೆ ಪುಣ್ಯಸ್ನಾನಕ್ಕೂ ಅವಕಾಶ ನೀಡಲಾಗಿದೆ. ನದಿಯಲ್ಲಿ ಸಾಬೂನು ಹಾಕಿ ಸ್ನಾನ ಮಾಡದಂತೆ ಸೂಚಿಸಲಾಗಿದೆ. ಭಕ್ತರು ಹಲ್ಲು ಉಜ್ಜುವುದು, ಬಟ್ಟೆ ತೊಳೆಯುವುದನ್ನು ನಿಷೇಧಿಸಲಾಗಿದೆ.