ಬೆಳ್ತಂಗಡಿ (ದಕ್ಷಿಣ ಕನ್ನಡ): ಲಾಕ್ಡೌನ್ನಿಂದ ಧಾರ್ಮಿಕ ಕೇಂದ್ರಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಅದರಂತೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿಯೂ ಪ್ರವೇಶವನ್ನು ಬಂದ್ ಮಾಡಲಾಗಿತ್ತು. ಇದೀಗ ಮುಜರಾಯಿ ಇಲಾಖೆಯು ಜೂನ್ 1ರಿಂದ ಧಾರ್ಮಿಕ ಕೇಂದ್ರಗಳಿಗೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಿದೆ. ಅದರಂತೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಜೂನ್ 1ರಿಂದ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ವಿ. ಶೆಟ್ಟಿ ತಿಳಿಸಿದ್ದಾರೆ.
ಸರ್ಕಾರದ ನಿಯಮಾವಳಿಗಳನ್ನು ಪಾಲಿಸುವುದರ ಜೊತೆಗೆ ಕ್ಷೇತ್ರದ ವತಿಯಿಂದ ಅತ್ಯಂತ ಕಾಳಜಿ ವಹಿಸಲಾಗುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಸಂಪೂರ್ಣ ಒತ್ತು ನೀಡಲಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಕಡ್ಡಾಯ ಒಳಗೊಂಡಂತೆ ಭಕ್ತರ ಸಂಖ್ಯೆಯಲ್ಲಿ ನಿಯಂತ್ರಣ ಕಾಪಾಡಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪೂರ್ವ ತಯಾರಿ ಮಾಡಲಾಗುವುದು. ವಸತಿ ವ್ಯವಸ್ಥೆ ಬಗ್ಗೆ ಯಾವುದೇ ತೀರ್ಮಾನ ಸದ್ಯಕ್ಕೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಲಾಕ್ಡೌನ್ ಸಡಿಲಿಕೆಯಾದರೂ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಅಂಗಡಿ ಮಾಲೀಕರು ಅಂಗಡಿ ತೆರೆಯದೆ, ಗ್ರಾಮಸ್ಥರು ಓಡಾಡದೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ವಾಹನ ಚಾಲಕರು ಸಹಿತ ಸ್ವಯಂ ಪ್ರೇರಿತ ಜಾಗೃತಿ ಮೂಡಿಸಿದ್ದಾರೆ. ಇದು ಇದುವರೆಗೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಧರ್ಮ ಜಾಗೃತಿಗೆ ಮಾದರಿಯಾಗಿದೆ ಎಂದಿದ್ದಾರೆ.