ಬೆಳ್ತಂಗಡಿ (ದಕ್ಷಿಣಕನ್ನಡ): ಧರ್ಮಸ್ಥಳದ ಬಸದಿಯಲ್ಲಿರುವ ಮೂಲ ಸ್ವಾಮಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಮತ್ತು ದೇವಸ್ಥಾನದಲ್ಲಿ ಮುಖ್ಯ ಆರಾಧ್ಯ ದೇವರಾದ ಶ್ರೀ ಮಂಜುನಾಥ ಸ್ವಾಮಿ ಶಾಂತಿ, ತಾಳ್ಮೆಯ ಸಾಕಾರ ಮೂರ್ತಿಗಳಾಗಿದ್ದಾರೆ. ಇಲ್ಲಿ ಯಾವಾಗಲೂ ಶಾಂತಿ, ನೆಮ್ಮದಿ, ಸಾಮರಸ್ಯ ನೆಲೆಸಿರುತ್ತದೆ. ಸದಾ ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತ ಪವಿತ್ರ ಪುಣ್ಯ ಕ್ಷೇತ್ರ ಧರ್ಮಸ್ಥಳ. ತಾನು ಮತ್ತು ಕುಟುಂಬದವರು ಎಲ್ಲರೂ ಶಾಂತಚಿತ್ತರಾಗಿದ್ದೇವೆ. ಇಲ್ಲಿ ಶ್ರದ್ಧಾ- ಭಕ್ತಿಯಿಂದ ಬರುವ ಎಲ್ಲ ಭಕ್ತರಿಗೂ ಶಾಂತಿ, ನೆಮ್ಮದಿ, ತಾಳ್ಮೆ ಇರುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಭಾನುವಾರ ಧರ್ಮಸ್ಥಳದಲ್ಲಿ ನಡೆದ ಧರ್ಮ ಸಂರಕ್ಷಣಾ ಪಾದಯಾತ್ರೆ ಸಂದರ್ಭ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀ ಮಂಜುನಾಥನು ವಿಷಕಂಠನಾಗಿದ್ದು, ದುಷ್ಟ ಶಕ್ತಿಗಳನ್ನು ನಾಶಮಾಡಿ ಶಿಷ್ಟರನ್ನು ರಕ್ಷಣೆ ಮಾಡುತ್ತಾರೆ. ಧರ್ಮಸ್ಥಳದ ಅಸಂಖ್ಯ ಭಕ್ತರು ಸ್ವಯಂ - ಪ್ರೆರಣೆಯಿಂದ ಕ್ಷೇತ್ರದ ರಕ್ಷಣೆಗಾಗಿ ಮಾಡಿರುವ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಒಂದು ದೇಶವನ್ನು ಹಾಳು ಮಾಡಬೇಕಾದರೆ ಅಲ್ಲಿನ ಧರ್ಮ, ಸಂಸ್ಕೃತಿಗೆ ಹಾನಿ ಮಾಡಬೇಕಂತೆ. ಹಾಗೆ ಧರ್ಮಸ್ಥಳದ ಬಗ್ಗೆ ಸುಳ್ಳು ವದಂತಿಯೊಂದಿಗೆ ಅಪ್ರಚಾರ ಮಾಡಲಾಗಿದೆ. ಕಾನೂನಿನ ಚೌಕಟ್ಟಿನೊಳಗೆ ಯಾವುದೇ ತನಿಖೆಗೂ ನಾನು ಸಿದ್ಧ ಎಂದು ಹೇಳಿದರು. ಆದರೆ ತಮ್ಮ ಮನ, ವಚನ, ಕಾಯ ಪವಿತ್ರವಾಗಿದೆ. ನಮ್ಮಲ್ಲಿ ಯಾವುದೇ ಸಂಶಯ, ಗೊಂದಲವಿಲ್ಲ. ನಮ್ಮ ಪ್ರಬಲ ಇಚ್ಛಾಶಕ್ತಿ, ನೈತಿಕ ಬಲ, ದೃಢ ಸಂಕಲ್ಪಗಳು ಭಕ್ತರು ಮತ್ತು ಅಭಿಮಾನಿಗಳ ಬೆಂಬಲದಿಂದ ಇನ್ನಷ್ಟು ದುಪ್ಪಟ್ಟಾಗಲಿವೆ. ಭಕ್ತರ ಹಾಗೂ ಅಭಿಮಾನಿಗಳ ಪ್ರೀತಿ - ವಿಶ್ವಾಸ ಮತ್ತು ಗೌರವ ತನಗೆ ವಜ್ರಕವಚವಾಗಿ ರಕ್ಷಣೆ ನೀಡುತ್ತದೆ ಎಂದು ಹೇಳಿದರು.
ಸಭೆಯ ಆರಂಭದಲ್ಲಿ ಹೆಗ್ಗಡೆಯವರು ವೇದಿಕೆಯ ಮಧ್ಯದಲ್ಲಿದ್ದ ಧರ್ಮಪೀಠದಲ್ಲಿ ಆಸೀನರಾದರು. ಈ ವೇಳೆ ಎಲ್ಲ ಸ್ವಾಮೀಜಿಗಳು ಹಣ್ಣು-ಹಂಪಲು, ತಾಂಬೂಲ, ಕಾಯಿ, ವೀಳ್ಯದೆಲೆ ಇರುವ ಹರಿವಾಣಕ್ಕೆ ಅಭಿಮಂತ್ರಿಸಿದ ಮಂತ್ರಾಕ್ಷತೆ ಹಾಕಿ ಶುಭ ಹಾರೈಸಿದರು. ಬಳಿಕ ಸಂಕಲ್ಪ ಪೀಠದಲ್ಲಿದ್ದ ಹರಿವಾಣವನ್ನು ಹೆಗ್ಗಡೆಯವರಿಗೆ ಹಸ್ತಾಂತರಿಸಲಾಯಿತು. ನಂತರ ಸಭಾಸದಸ್ಯರೆಲ್ಲರೂ ನಾವು ಸದಾ ಧರ್ಮದ ರಕ್ಷಣೆಗಾಗಿ ಧರ್ಮಸ್ಥಳದ ರಕ್ಷಣೆಗೆ ನಿಮ್ಮೊಂದಿಗಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ, ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕಾರಿಂಜೆಯ ಮುಕ್ತಾನಂದ ಸ್ವಾಮೀಜಿ, ಫಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ, ಸೇರಿದಂತೆ 15 ಮಂದಿ ಮಠಾಧೀಶರು ಹಾಗೂ ಸಂಸದ ನಳಿನ್‍ಕುಮಾರ್ ಕಟೀಲ್ ಮತ್ತು ಶಾಸಕ ಹರೀಶ್‍ಪೂಂಜ ಉಪಸ್ಥಿತರಿದ್ದರು.
ಕೊಲ್ಲೂರಿನಿಂದ ಮತ್ತು ಮಂಗಳೂರಿನ ಕದ್ರಿ ದೇವಸ್ಥಾನದಿಂದ ಧರ್ಮಸ್ಥಳಕ್ಕೆ ಆಗಮಿಸಿದ ಧರ್ಮಸಂರಕ್ಷಣಾ ರಥವನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‍ಕೃಷ್ಣ ಪಡ್ವೆಟ್ನಾಯ, ಶಾಸಕ ಹರೀಶ್ ಪೂಂಜ, ಸಂಚಾಲಕ ಶಶಿಧರ ಶೆಟ್ಟಿ, ಬಸ್ರೂರು ಅಪ್ಪಣ್ಣ ಹೆಗ್ಡೆ ಸ್ವಾಗತಿಸಿದರು. ಕನ್ಯಾಡಿಯ ಬದ್ರಿಯಾ ಮಸೀದಿ ಬಳಿ ಮುಸ್ಲಿಂ ಬಾಂಧವರು ಪಾದಯಾತ್ರಿಗಳಿಗೆ ಉಚಿತ ಪಾನೀಯ ವಿತರಿಸಿದರು. ಸುಮಾರು ಐವತ್ತು ಸಾವಿರಕ್ಕೂ ಅಧಿಕ ಭಕ್ತರು ಉಜಿರೆಯಿಂದ ಧರ್ಮಸ್ಥಳಕ್ಕೆ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಧರ್ಮಸ್ಥಳದಲ್ಲಿ ಮುಖ್ಯ ಪ್ರವೇಶದ್ವಾರದ ಬಳಿ ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್ ಉಭಯ ರಥ ಮತ್ತು ಪಾದಯಾತ್ರಿಗಳನ್ನು ಸ್ವಾಗತಿಸಿದರು. ಮಳೆಯನ್ನೂ ಲೆಕ್ಕಿಸದೆ ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ಓದಿ : ನ.2ರಿಂದ ಹಾಸನಾಂಬೆ ಜಾತ್ರಾ ಮಹೋತ್ಸವ: 24ಗಂಟೆಯೂ ದರ್ಶನ ಭಾಗ್ಯ